ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆ ರಾಜ್ಯದಲ್ಲಿ ಬಿಜೆಪಿ ಪರ ಇಂತಹ ಪ್ರಬಲ ಅಲೆ ಇರುವುದು ತಜ್ಞರಿಗೆ ಏಕೆ ಗೊತ್ತಾಗಲಿಲ್ಲ. ಇದು ಒಂದು ಸಣ್ಣ ಕೊಳದಲ್ಲಿ ಆದ ಚಲನೆಯಲ್ಲ. ಇದು ಸುನಾಮಿ ಎಂದು ಬಣ್ಣಿಸಿದ್ದಾರೆ.
ಬೆಂಗಳೂರು(ಮಾ. 11): ದೇಶದಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆ ಏರುತ್ತಿರುವುದು ಅವರ ವಿರೋಧಿಗಳ ಮೇಲೂ ಪರಿಣಾಮ ಬೀರುತ್ತಿದೆ. ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಮೋದಿ ನಾಯಕತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಎದುರಿಸವಂತಹ ಛಾತಿ ಇರುವ ನಾಯಕ ಯಾರೂ ಇಲ್ಲ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಒಮರ್ ಟ್ವೀಟ್ ಮಾಡಿದ್ದಾರೆ. 2019 ಚುನಾವಣೆ ಗೆಲ್ಲುವುದು ಅಸಾಧ್ಯ. 2024ರ ಚುನಾವಣೆಗೆ ಕಾರ್ಯತಂತ್ರ ರೂಪಿಸಬೇಕಷ್ಟೇ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಮೋದಿಯನ್ನು ಟೀಕಿಸಿದರೆ ಏನೂ ಉಪಯೋಗವಿಲ್ಲ. ನೀವೆಷ್ಟೇ ಟೀಕಿಸಿದರೂ ಇದಕ್ಕಿಂತ ಭಿನ್ನ ಫಲಿತಾಂಶ ಸಿಕ್ಕೋದಿಲ್ಲ ಎಂದು ಹೇಳಿದ ಒಮರ್ ಅಬ್ದುಲ್ಲಾ, ಮೋದಿಯನ್ನು ಟೀಕಿಸುವುದು ಬಿಟ್ಟು ಸಕರಾತ್ಮಕವಾಗಿ ಜನರಿಗೆ ಪರ್ಯಾಯ ವ್ಯವಸ್ಥೆಯ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆ ರಾಜ್ಯದಲ್ಲಿ ಬಿಜೆಪಿ ಪರ ಇಂತಹ ಪ್ರಬಲ ಅಲೆ ಇರುವುದು ತಜ್ಞರಿಗೆ ಏಕೆ ಗೊತ್ತಾಗಲಿಲ್ಲ. ಇದು ಒಂದು ಸಣ್ಣ ಕೊಳದಲ್ಲಿ ಆದ ಚಲನೆಯಲ್ಲ. ಇದು ಸುನಾಮಿ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ, ಬಿಜೆಪಿ ಚುನಾವಣೆ ಗೆಲ್ಲಬಹುದೇ ಹೊರತು ಜನರ ಮನಸ್ಸನ್ನು ಒಲಿಸಿಕೊಳ್ಳಲಾಗುವುದಿಲ್ಲ ಎಂದು ಟ್ವೀಟಿಗರೊಬ್ಬರ ಅಭಿಪ್ರಾಯಕ್ಕೆ ಒಮರ್ ಒಬ್ದುಲ್ಲಾ ವಿರೋಧ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ. ಉತ್ತರಪ್ರದೇಶದಲ್ಲಿ ಬಹುತೇಕ ಮಂದಿಯ ಮನಸ್ಸನ್ನು ಬಿಜೆಪಿ ಗೆದ್ದಿರುವುದನ್ನು ನಾವು ತಳ್ಳಿಹಾಕಲಾಗುವುದಿಲ್ಲ ಎಂದು ಒಮರ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ, ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಗೋ.ಮಧುಸೂದನ್ ಅವರು ಒಮರ್ ಅಬ್ದುಲ್ಲಾ ಹೇಳಿಕೆಗಳನ್ನು ಸ್ವಾಗತಿಸಿದ್ದಾರೆ. ಇದು ಮೋದಿಗೆ ಜನಮನ್ನಣೆ ಹೆಚ್ಚುತ್ತಿರುವ ಕುರುಹಾಗಿದೆ. ದೇಶಾದ್ಯಂತ ಬಿಜೆಪಿ ಇನ್ನೂ ಆಳವಾಗಿ ಬೇರುಬಿಡಲಿರುವ ಸೂಚನೆ ಇದಾಗಿದೆ ಎಂದು ಗೋ.ಮಧುಸೂದನ್ ಅಭಿಪ್ರಾಯಪಟ್ಟಿದ್ದಾರೆ.
