ಬೆಂಗಳೂರು(ಜುಲೈ 24): ನಟ ಭುವನ್ ಪೊನ್ನಣ್ಣರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಗ್ ಬಾಸ್ ವಿಜೇತ 'ಒಳ್ಳೆ ಹುಡ್ಗ' ಪ್ರಥಮ್ ಸೋಮವಾರ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿ ಬಂಧಿಸಲು ಕಾಯುತ್ತಿದ್ದ ಪೊಲೀಸರ ಕಣ್ತಪ್ಪಿಸಿ ಪ್ರಥಮ್ ನೇರವಾಗಿ ಎರಡನೇ ಎಸಿಜೆಎಂ ಕೋರ್ಟ್'ಗೆ ಹಾಜರಾಗಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಪ್ರಥಮ್ ಪೊಲೀಸರ ಕಣ್ತಪ್ಪಿಸಿ ನ್ಯಾಯಾಲಯಕ್ಕೆ ಆಗಮಿಸಿದ್ದಾರೆನ್ನಲಾಗಿದೆ. ಇದೇ ವೇಳೆ, ಪ್ರಥಮ್'ರನ್ನು ವಿಚಾರಣೆಗೊಳಪಡಿಸಲು ಪೊಲೀಸರು ಪ್ರಥಮ್'ರನ್ನು ಸಂಪರ್ಕಿಸಿದಾಗ, ಆತ ತಾನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿದ್ದುದಾಗಿ ಹೇಳಿದ್ದರಂತೆ. ಇದೀಗ, ಪ್ರಥಮ್ ಕೋರ್ಟ್'ಗೆ ಹಾಜರಾಗುವ ಮೂಲಕ ಪೊಲೀಸರಿಗೇ ಚಳ್ಳೆಹಣ್ಣು ತಿನಿಸಿರುವುದು ವೇದ್ಯವಾಗಿದೆ.

ಏನಿದು ಪ್ರಕರಣ?
ಮೊನ್ನೆ, "ಸಂಜು ಮತ್ತು ನಾನು" ಧಾರಾವಾಹಿಯ ಶೂಟಿಂಗ್ ಸೆಟ್'ನಲ್ಲಿ ಭುವನ್'ನ ತೊಡೆಯನ್ನು ಪ್ರಥಮ್ ಕಚ್ಚಿರುವ ಆರೋಪವಿದೆ. ಸಂಜನಾ ವಿಚಾರದಲ್ಲಿ ನಡೆದ ಜಗಳದ ವೇಳೆ ಇಬ್ಬರ ನಡುವೆ ವಾಗ್ವಾದವಾಗಿ ಪ್ರಥಮ್'ರನ್ನು ಭುವನ್ ನೂಕಿದ್ದಾರೆ. ಕೆಳಗೆ ಬಿದ್ದ ಪ್ರಥಮ್ ಮೇಲೆದ್ದು ಭುವನ್ ತೊಡೆಯನ್ನು ಕಚ್ಚಿ ಗಾಯಗೊಳಿಸಿದ್ದಾರೆ. ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ. ಹೀಗೆಂದು ಭುವನ್ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾನು ಸಸ್ಯಾಹಾರಿಯಾಗಿದ್ದು ಭುವನ್ ತೊಡೆ ತಿನ್ನಲು ತನಗೆ ಇಷ್ಟವಿಲ್ಲ ಎಂದು ಪ್ರಥಮ್ ವ್ಯಂಗ್ಯವಾಗಿ ಫೇಸ್ಬುಕ್'ನಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದಾರೆ.