ನವದೆಹಲಿ (ಜ. 15): ಹೊಟ್ಟೆಗೆ ಬಾಂಬ್‌ ಕಟ್ಟಿಕೊಂಡಿದ್ದ ಆತ್ಮಹತ್ಯಾ ಬಾಂಬರ್‌ನೊಬ್ಬನನ್ನು ಭಾರತೀಯ ಸೇನೆ ಸೆರೆಹಿಡಿದಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಂಜಯ್‌ ಚೌದರಿ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಹಳದಿ ಬಣ್ಣದ ಬ್ಯಾಗ್‌ಗಳನ್ನು ತನ್ನ ಹೊಟ್ಟೆಗೆ ಕಟ್ಟಿಕೊಂಡು ಸೇನಾಧಿಕಾರಿಯ ಜೊತೆ ನೀಂತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ಇವನು ಸೂಸೈಡ್‌ ಬಾಂಬರ್‌. ಭಾರತೀಯ ಸೇನೆ ಈತನನ್ನು ಸೆರೆಹಿಡಿದಿದೆ’ ಎಂದು ಒಕ್ಕಣೆ ಬರೆಯಲಾಗಿದೆ. ಸದ್ಯ ಈ ಪೋಸ್ಟ್‌ 6,300 ಬಾರಿ ಶೇರ್‌ ಆಗಿದೆ. ಫೇಸ್‌ಬುಕ್‌ ಮಾತ್ರವಲ್ಲದೆ ಟ್ವೀಟರ್‌ ಮತ್ತು ವಾಟ್ಸ್‌ಆ್ಯಪ್‌ಗಳಲ್ಲೂ ವೈರಲ್‌ ಆಗಿದೆ.

ಆದರೆ ನಿಜಕ್ಕೂ ಫೋಟೋದಲ್ಲಿರುವಾತ ಸೂಸೈಡ್‌ ಬಾಂಬರ್‌ ಹೌದೇ ಎಂದು ಆಲ್ಟ್‌ ನ್ಯೂಸ್‌ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ಕಳೆದ ವರ್ಷವೂ ಇದೇ ಫೋಟೋ ಹರಿದಾಡಿವುದು ಪತ್ತೆಯಾಗಿದೆ. ಈ ಸುದ್ದಿ ಸತ್ಯಾಸತ್ಯ ಏನು ಎಂದು ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ 2014ರ ಟ್ವೀಟ್‌ವೊಂದರಲ್ಲಿ ‘ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಬಂಧನ’ ಎಂದು ಬರೆದು ಇದೇ ಪೋಟೋವನ್ನು ಪೋಸ್ಟ್‌ ಮಾಡಲಾಗಿರುವುದು ಪತ್ತೆಯಾಗಿದೆ.

ಅಲ್ಲದೆ ಪಾಕಿಸ್ತಾನ ಮೂಲದ ಪತ್ರಕರ್ತರೊಬ್ಬರ ಟ್ವೀಟ್‌ನಲ್ಲೂ ಇದೇ ರೀತಿ ಬರೆಯಲಾಗಿದೆ. ಅಂದರೆ ಈತ ಪಾಕಿಸ್ತಾ ಮತ್ತು ಅಷ್ಘಾನಿಸ್ತಾನ ಗಡಿಗಳಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮಾಡುತ್ತಿದ್ದು, ಪಾಕ್‌ ಸೇನೆ 2014ರಲ್ಲಿ ಈತನನ್ನು ಬಂಧಿಸಿತ್ತು. ಸದ್ಯ ಅದೇ ಫೋಟೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಯನ್ನು ಹರಡಲಾಗುತ್ತಿದೆ.

-ವೈರಲ್ ಚೆಕ್