ಬೆಂಗಳೂರು (ಮಾ. 26):  ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿ 2016’ ಉಲ್ಲಂಘಿಸಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿದ್ದ ಓಲಾ ಸಂಸ್ಥೆಗೆ ರಾಜ್ಯ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ದಾಖಲೆ ಮಟ್ಟದ 15 ಲಕ್ಷ ರು. ದಂಡ ವಿಧಿಸಿದೆ. ಜತೆಗೆ, ಅಗ್ರಿಗೇಟರ್‌ (ಕ್ಯಾಬ್‌ ಸೇವೆಗೆ ಅವಕಾಶ ಒದಗಿಸುವ) ಪರವಾನಗಿ ಅಮಾನತು ಆದೇಶ ಹಿಂಪಡೆದಿದೆ.

ಸೋಮವಾರ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿ ನಡೆದ ರಾಜ್ಯ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಓಲಾ ಸಂಸ್ಥೆಯ ಪ್ರತಿನಿಧಿಗಳು ಅಗ್ರಿಗೇಟರ್‌ ಪರವಾನಗಿ ನಿಯಮ ಉಲ್ಲಂಘಿಸಿರುವ ತಪ್ಪು ಒಪ್ಪಿಕೊಂಡು ಪ್ರಾಧಿಕಾರ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಲಿಖಿತವಾಗಿ ಮುಚ್ಚಳಿಕೆ ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಹಾಗೂ ಪ್ರಾಧಿಕಾರದ ಸದಸ್ಯರು ಓಲಾ ಸಂಸ್ಥೆಗೆ ಭಾರಿ ಮೊತ್ತದ ದಂಡ ವಿಧಿಸಿ, ಪರವಾನಗಿ ಅಮಾನತು ಆದೇಶ ಹಿಂಪಡೆದರು.

ಓಲಾ ಸಂಸ್ಥೆ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿದ್ದ ಆರೋಪದಡಿ ರಾಜ್ಯ ಸಾರಿಗೆ ಪ್ರಾಧಿಕಾರವು ಓಲಾ ಸಂಸ್ಥೆಯ ಅಗ್ರಿಗೇಟರ್‌ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಶುಕ್ರವಾರ (ಮಾ.22) ಆದೇಶಿಸಿತ್ತು. ಎಲ್ಲ ಕಡೆಯಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚಾದ್ದರಿಂದ ಸಾರಿಗೆ ಇಲಾಖೆ ಆರು ತಿಂಗಳ ಅವಧಿಗೆ ಅನ್ವಯವಾಗುವಂತೆ ಹೊರಡಿಸಿದ್ದ ಪರವಾನಗಿ ಅಮಾನತು ಆದೇಶವನ್ನು ಕೇವಲ ಮೂರೇ ದಿನಕ್ಕೆ ಹಿಂಪಡೆದಿದೆ.

ಇದು ದಿಢೀರ್‌ ಕ್ರಮವಲ್ಲ:

ರಾಜ್ಯ ಸಾರಿಗೆ ಪ್ರಾಧಿಕಾರದ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ವಿ.ಪಿ.ಇಕ್ಕೇರಿ, ಓಲಾ ಸಂಸ್ಥೆ ಅಗ್ರಿಗೇಟರ್‌ ಪರವಾನಗಿ ಪಡೆದು ನಿಯಮ ಬಾಹಿರವಾಗಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿತ್ತು. ಕೂಡಲೇ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಆರ್‌ಟಿಎಯಿಂದ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಆದರೂ, ಸೇವೆ ಮುಂದುವರಿಸಿದ್ದರಿಂದ ಕಾರ್ಯಾಚರಣೆ ಮಾಡಿ 252 ಓಲಾ ಬೈಕ್‌ ಟ್ಯಾಕ್ಸಿ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ಮತ್ತೊಮ್ಮೆ ನೋಟಿಸ್‌ ನೀಡಿದಾಗ ಸರಿಯಾದ ಸಮಜಾಯಿಷಿ ನೀಡಲಿಲ್ಲ.

ಸುರಕ್ಷತೆ ಹಿನ್ನೆಲೆಯಲ್ಲಿ ಕ್ಯಾಬ್‌ಗಳಲ್ಲಿ ಚೈಲ್ಡ್‌ ಲಾಕ್‌ ಸಿಸ್ಟಂ ತೆರವುಗೊಳಿಸುವಂತೆ ಹೈಕೋರ್ಟ್‌ ಆದೇಶಿಸಿದ್ದರೂ ಹಲವು ಕ್ಯಾಬ್‌ಗಳಲ್ಲಿ ತೆರವು ಮಾಡಿರಲಿಲ್ಲ. ಈ ಎಲ್ಲ ಕಾರಣಗಳಿಂದ ಸಂಸ್ಥೆಯ ಅಗ್ರಿಗೇಟರ್‌ ಪರವಾನಗಿ ಅಮಾನತುಗೊಳಿಸುವ ಕಠಿಮ ಕ್ರಮ ಕೈಗೊಳ್ಳಲಾಗಿತ್ತು. ಇದೇನೂ ದಿಢೀರ್‌ ಕ್ರಮವಲ್ಲ ಎಂದು ಹೇಳಿದರು.

ಕಾನೂನು ಪ್ರಕಾರ ಅಮಾನತು ಮಾಡುವ ಹಾಗೂ ಹಿಂಪಡೆಯುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ ಎಂದು ಅಮಾನತು ಆದೇಶ ಹಿಂಪಡೆದ ಕ್ರಮವನ್ನು ಸಮರ್ಥಿಸಿಕೊಂಡ ಅವರು ಈ ನಿರ್ಧಾರದಲ್ಲಿ ರಾಜಕೀಯ ಒತ್ತಡವಿಲ್ಲ ಎಂದರು. ಅಲ್ಲದೆ, ಸಚಿವ ಪ್ರಿಯಾಂಕ ಖರ್ಗೆ ಪ್ರಾಧಿಕಾರದ ನಿರ್ಧಾರಕ್ಕೂ ಮುಂಚೆಯೇ ಓಲಾ ಸೇವೆ ಮುಂದುವರಿಯಲಿದೆ ಎಂದು ಟ್ವೀಟ್‌ ಮಾಡಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಓಲಾ ಕ್ಯಾಬ್‌ಗಳು ಎಂದಿನಂತೆ ಸೇವೆ ನೀಡಲಿವೆ. ಅಲ್ಲದೆ, ಹೊಸ ತಾಂತ್ರಿಕತೆಗಳಿಗೆ ಸಂಬಂಧಿಸಿದಂತೆ ತುರ್ತಾಗಿ ನೀತಿಗÜಳನ್ನು ರೂಪಿಸುವ ಅವಶ್ಯಕತೆಯಿದೆ. ಈ ನೀತಿ ನಿರೂಪಣೆಯಲ್ಲಿ ಉದ್ಯಮಗಳು ಹಾಗೂ ಸರ್ಕಾರ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕಿದೆ ಎಂದು ಭಾನುವಾರವೇ ಟ್ವೀಟ್‌ ಮಾಡಿದ್ದರು.

ರ್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ನೋಟಿಸ್‌

ಬೆಂಗಳೂರು ನಗರದಲ್ಲಿ ರಾರ‍ಯಪಿಡೋ ಸಂಸ್ಥೆ ಅನಧಿಕೃತವಾಗಿ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ ಮಾ.19ರಂದು ರಾರ‍ಯಪಿಡೋ ಸಂಸ್ಥೆಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, ಸ್ಪಷ್ಟನೆಗೆ ಎದುರು ನೋಡುತ್ತಿದ್ದೇವೆ. 10 ದಿನದೊಳಗೆ ನೋಟಿಸ್‌ಗೆ ಸ್ಪಂದಿಸದಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ತಿಳಿಸಿದರು.

ಬೈಕ್‌ ಟ್ಯಾಕ್ಸಿಗೆ ತಲಾ 6000 ರು. ದಂಡ

ಅಗ್ರಿಗೇಟರ್‌ ಪರವಾನಗಿ ನಿಯಮ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿದ್ದ 252 ಓಲಾ ಬೈಕ್‌ ಟ್ಯಾಕ್ಸಿಗಳನ್ನು ಸಾರಿಗೆ ಇಲಾಖೆ ಜಪ್ತಿ ಮಾಡಿದ್ದು, ತಲಾ 6 ಸಾವಿರ ರು.ನಂತೆ 15 ಲಕ್ಷ ರು. ದಂಡ ವಿಧಿಸಿದೆ. ನಿಯಮ ಉಲ್ಲಂಘನೆಗೆ ಕನಿಷ್ಠ 5 ಸಾವಿರ ರು.ನಿಂದ ಗರಿಷ್ಠ 10 ಸಾವಿರ ರು.ವರೆಗೂ ದಂಡ ವಿಧಿಸಲು ಅವಕಾಶವಿದೆ. ಅದರಂತೆ 252 ಓಲಾ ಬೈಕ್‌ ಟ್ಯಾಕ್ಸಿಗಳಿಗೆ ದಂಡ ವಿಧಿಸಲಾಗಿದೆ.

ಬೈಕ್‌ ಟ್ಯಾಕ್ಸಿ ಬಗ್ಗೆ ನಾಳೆ ಸಭೆ

ಕಳೆದ ವರ್ಷ ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಲು ಅವಕಾಶ ನೀಡುವ ಸಂಬಂಧ ಸಾಧಕ-ಬಾಧಕ ಅಧ್ಯಯನ ಮಾಡಲು ಬಿಎಂಆರ್‌ಸಿಎಲ್‌ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆದರೆ, ಇದುವರೆಗೂ ಆ ಸಮಿತಿ ಅಧ್ಯಯನ ವರದಿ ನೀಡಿಲ್ಲ. ಇದೀಗ ಮಾಚ್‌ರ್‍ 27ರಂದು ಸಮಿತಿಯ ಸಭೆ ನಿಗದಿಗೊಂಡಿದೆ.

ಅಡಚಣೆಗೆ ಓಲಾ ವಿಷಾದ

ಕೆಲ ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗಳು ಬಗೆಹರಿದಿವೆ. ಈ ಅವಧಿಯಲ್ಲಿ ಚಾಲಕ ಪಾಲುದಾರರು ಹಾಗೂ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗೆ ವಿಷಾದಿಸುತ್ತೇವೆ. ಚಲನಶೀಲತೆಯ ಸವಾಲುಗಳನ್ನು ಎದುರಿಸಲು ರಾಜ್ಯ ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲು ನಾವು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಚಾಲಕರಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ಬದ್ಧರಾಗಿದ್ದೇವೆ ಎಂದು ಓಲಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಓಲಾ ಬೈಕ್‌ ಟ್ಯಾಕ್ಸಿ ಈ ಹಿಂದೆಯೇ ಸ್ಥಗಿತ

ಪ್ರಾಯೋಗಿಕವಾಗಿ ಬೆಂಗಳೂರು ನರಗದಲ್ಲಿ ಆರಂಭಿಸಿದ್ದ ಬೈಕ್‌ ಟ್ಯಾಕ್ಸಿ ಸೇವೆಯನ್ನು ಈಗಾಗಲೇ ಅದನ್ನು ಸ್ಥಗಿತಗೊಳಿಸಲಾಗಿದೆ. ಓಲಾ ಆ್ಯಪ್‌ನಲ್ಲೂ ಬೈಕ್‌ ಟ್ಯಾಕ್ಸಿ ಆಯ್ಕೆ ತೆರವುಗೊಳಿಸಲಾಗಿದೆ. ಆದರೂ ಕೆಲವರಿಗೆ ಓಲಾ ಬೈಕ್‌ ಪ್ರಮೋಷನ್‌ ಸಂದೇಶಗಳು ಬರುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದರೆ, ಅವು ಹೊರರಾಜ್ಯದ ಬೈಕ್‌ ಟ್ಯಾಕ್ಸಿಗೆ ಸಂಬಂಧಿಸಿದ ಸಂದೇಶಗಳು ಎಂದು ಓಲಾ ಸಂಸ್ಥೆ ಸ್ಪಷ್ಟಪಡಿಸಿದೆ.

ಕೆಲಸದ ಅವಧಿ ನಿಗದಿಗೊಳಿಸಬೇಕು:

ರಾಜ್ಯ ಸಾರಿಗೆ ಪ್ರಾಧಿಕಾರದ ಸದಸ್ಯ ಎಡಿಜಿಪಿ ಪಿ.ಎಸ್‌.ಸಂಧು ಮಾತನಾಡಿ, ಓಲಾ ಸಂಸ್ಥೆ ಅಗ್ರಿಗೇಟರ್‌ ಪರವಾನಗಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗ್ರಾಹಕರಿಂದ ಸಂಸ್ಥೆ ಹಾಗೂ ಕ್ಯಾಬ್‌ ಚಾಲಕರ ವಿರುದ್ಧ ಹಲವು ದೂರುಗಳು ಬರುತ್ತವೆ. ಕೆಲ ಚಾಲಕರ ವರ್ತನೆ ಬಗ್ಗೆಯೂ ದೂರುಗಳು ಬರುತ್ತಿವೆ. ಅಂತಹ ಚಾಲಕರಿಗೆ ಎಚ್ಚರಿಕೆ ನೀಡಬೇಕು. ಇನ್ನು 24 ತಾಸು ಚಾಲಕರು ಕೆಲಸ ಮಾಡುವುದರಿಂದ ವಿಶ್ರಾಂತಿ ಇಲ್ಲದೆ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ಸಂಸ್ಥೆಯು ಚಾಲಕರಿಗೆ ಕೆಲಸದ ಅವಧಿ ನಿಗದಿಗೊಳಿಸಬೇಕು. ಚಾಲಕರೇ ಕೆಲಸ ಮಾಡಲು ಮುಂದೆ ಬಂದರೂ ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಕೆಲಸದ ಅವಧಿ ಕಡಿಮೆ ಮಾಡಬೇಕು ಎಂದು ಓಲಾ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ಅಥವಾ

ಓಲಾ ಸಂಸ್ಥೆ ಅಗ್ರಿಗೇಟರ್‌ ಪರವಾನಗಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗ್ರಾಹಕರಿಂದ ಸಂಸ್ಥೆ ಹಾಗೂ ಕ್ಯಾಬ್‌ ಚಾಲಕರ ವಿರುದ್ಧ ಹಲವು ದೂರುಗಳು ಬರುತ್ತವೆ. ಕೆಲ ಚಾಲಕರ ವರ್ತನೆ ಬಗ್ಗೆಯೂ ದೂರುಗಳು ಬರುತ್ತಿವೆ. ಅಂತಹ ಚಾಲಕರಿಗೆ ಎಚ್ಚರಿಕೆ ನೀಡಬೇಕು. ಇನ್ನು 24 ತಾಸು ಚಾಲಕರು ಕೆಲಸ ಮಾಡುವುದರಿಂದ ವಿಶ್ರಾಂತಿ ಇಲ್ಲದೆ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ಸಂಸ್ಥೆಯು ಚಾಲಕರಿಗೆ ಕೆಲಸದ ಅವಧಿ ನಿಗದಿಗೊಳಿಸಬೇಕು.

- ಪಿ.ಎಸ್‌.ಸಂಧು, ರಾಜ್ಯ ಸಾರಿಗೆ ಪ್ರಾಧಿಕಾರದ ಸದಸ್ಯ