Asianet Suvarna News Asianet Suvarna News

ಹುಬ್ಬಳಿಯಲ್ಲಿ ಪಾಲಿಕೆ ಅಧಿಕಾರಿಗಳಿಂದ ಆಪರೇಶನ್ ಫುಟ್’ಪಾತ್

ನಗರದ ಸುಭಾಷ್​ ರಸ್ತೆ ಹಾಗೂ ನೆಹರೂ ಮಾರುಕಟ್ಟೆಯಲ್ಲಿ  ರಸ್ತೆ ಮೇಲೆ ತಲೆ ಎತ್ತಿದ್ದ  ನೂರಾರು ಹೂವು, ಹಣ್ಣಿನ ಅಂಗಡಿಗಳನ್ನು ಪಾಲಿಕೆ ಸಿಬ್ಬಂದಿ ಟ್ರ್ಯಾಕ್ಟರ್​ಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ.

Officials Carry Operation Footpath in Hubballi

ಹುಬ್ಬಳ್ಳಿ (ಏ.08): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಇಂದು ಬೆಳ್ಳಂಬೆಳಗ್ಗೆ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು.

ನಗರದ ಸುಭಾಷ್​ ರಸ್ತೆ ಹಾಗೂ ನೆಹರೂ ಮಾರುಕಟ್ಟೆಯಲ್ಲಿ  ರಸ್ತೆ ಮೇಲೆ ತಲೆ ಎತ್ತಿದ್ದ  ನೂರಾರು ಹೂವು, ಹಣ್ಣಿನ ಅಂಗಡಿಗಳನ್ನು ಪಾಲಿಕೆ ಸಿಬ್ಬಂದಿ ಟ್ರ್ಯಾಕ್ಟರ್​ಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೀದಿಬದಿ ವ್ಯಾಪಾರಸ್ಥರು ಪ್ರಕರಣ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದ್ದು, ಯಾವುದೇ ಕಾರಣಕ್ಕೂ ಅಂಗಡಿಗಳನ್ನು ತೆರವುಗೊಳಿಸಬಾರದು ಎಂದು ಪಟ್ಟು ಹಿಡಿದರು. ಮಧ್ಯಪ್ರವೇಶಿಸಿದ ಮಹಾನಗರ ಪೊಲೀಸರು ವ್ಯಾಪಾರಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.

ಬಳಿಕ ರಸ್ತೆ ಬದಿಯಲ್ಲಿದ್ದ ಅಂಗಡಿಗಳಲ್ಲಿನ ಸರಕು, ಸರಂಜಾಮು ಸಮೇತ ಎಲ್ಲವನ್ನು ಎತ್ತಂಗಡಿ ಮಾಡಲಾಯಿತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಮೇಜರ್​ ಸಿದ್ದಲಿಂಗಯ್ಯ ಹಿರೇಮಠ ಅವರು ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಮುಂಜಾಗ್ರತ ಕ್ರಮವಾಗಿ ವ್ಯಾಪಕ ಬಿಗಿ ಪೊಲೀಸ್​ ಬಂದೋಬಸ್ತ್​ ಒದಗಿಸಲಾಯಿತು. ಕೆಲವು ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ತೆರವುಗೊಳಿಸಿಕೊಂಡರೆ ಕೆಲವರು ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಪಾಲಿಕೆ ಸ್ಥಳಕ್ಕೆ ಎರಡು ಜೆಸಿಬಿಗಳನ್ನು ಕರೆ ತಂದು ತೆರವು ಕಾರ್ಯಗೊಳಿಸಿದರು.

Follow Us:
Download App:
  • android
  • ios