ಲಕ್ಷ್ಮೇಶ್ವರ :  ಜು.3ರಂದು ನಡೆದ ಬೆತ್ತಲೆ ಸೇವೆ ಕುರಿತ ‘ಕನ್ನಡಪ್ರಭ’ ವರದಿಗೆ ಎಚ್ಚೆತ್ತ ಅಧಿಕಾರಿಗಳ ತಂಡ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯತೀರ್ಥ ಸಮೀಪದ ದುರ್ಗಾದೇವಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಗೆ, ಜು.10ರಂದು ಬೆತ್ತಲೆ ಸೇವೆ ಸೇರಿದಂತೆ ಮೂಢನಂಬಿಕೆಗಳ ಕುರಿತು ಪಟ್ಟಣದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ದೇವದಾಸಿ ಪುನರ್‌ವಸತಿ ಯೋಜನಾಧಿಕಾರಿ ಬಿ.ಆರ್‌.ಮಧುಸೂದನ ಹಾಗೂ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ದಸ್ತಿಗೀರ್‌ಸಾಬ್‌ ಮುಲ್ಲಾ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅಧಿಕಾರಿ ಮಧುಸೂದನ, ಪಟ್ಟಣದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿರುವುದು ನೋವಿನ ಸಂಗತಿ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ಅಲ್ಲದೆ ದೇವಸ್ಥಾನದಲ್ಲಿ ಬೆತ್ತಲೆ ಸೇವೆ ನಡೆಸದಂತೆ(ಬೇವಿನ ಉಡುಗೆ), ಇನ್ನಿತರ ಮೂಢನಂಬಿಕೆಯ ಕಾರ್ಯಗಳು ನಡೆಯದಂತೆ ಜಾಗೃತಿ ಮೂಡಿಸುವ ಬರಹಗಳನ್ನು ಗೋಡೆಯ ಮೇಲೆ ಬರೆಸುತ್ತೇವೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳೂ ಆಗಾಗ್ಗೆ ಇಂತಹ ಸ್ಥಳಕ್ಕೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ. ಮೂಢನಂಬಿಕೆ ನಿಷೇಧ ಕಾಯ್ದೆ ಹಾಗೂ ಅದರಲ್ಲಿ ಯಾವ ಆಚರಣೆಗಳನ್ನು ಸರ್ಕಾರ ನಿಷೇಧಿಸಿದೆ ಎಂಬ ಕುರಿತು ಜು.10ರಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಬೆತ್ತಲೆಸೇವೆ ನಡೆದ ಓಣಿಯಲ್ಲಿ ಹಾಗೂ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ವಿವಿಧ ಸಂಘಟನೆ ಹಾಗೂ ಪುರಸಭೆಯ ಸಹಕಾರದಿಂದ ಈ ಕಾರ್ಯಕ್ರಮ ನಡೆಸುತ್ತೇವೆ ಎಂದರು.