ಭುವನೇಶ್ವರ[ಜ.27]: ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಅಕ್ಕ, ಸಾಹಿತಿ ಗೀತಾ ಮೆಹ್ತಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಚುನಾವಣಾ ವರ್ಷದಲ್ಲಿ ತಮಗೆ ಈ ಪ್ರಶಸ್ತಿ ನೀಡುತ್ತಿರುವುದು ತಪ್ಪು ಅಭಿಪ್ರಾಯ ಮೂಡಿಸಬಹುದು ಎಂಬ ಕಾರಣ ನೀಡಿ ಅವರು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ.

ಈ ಕುರಿತು ನ್ಯೂಯಾರ್ಕ್ನಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಗೀತಾ ಮೆಹ್ತಾ, ‘ಕೇಂದ್ರ ಸರ್ಕಾರ ನಾನು ಪದ್ಮಶ್ರೀಗೆ ಅರ್ಹಳು ಎಂದು ಪರಿಗಣಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ಆದರೆ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನನಗೆ ಪ್ರಶಸ್ತಿ ದೊರಕಿರುವುದು ತಪ್ಪು ಅಭಿಪ್ರಾಯ ಮೂಡಿಸಬಹುದು. ಇದರಿಂದ ನನಗೂ ಮುಜುಗರ, ಸರ್ಕಾರಕ್ಕೂ ಮುಜುಗರ. ಹೀಗಾಗಿ ನಾನು ಪ್ರಶಸ್ತಿ ಸ್ವೀಕರಿಸುವುದಿಲ್ಲ’ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯ ಜೊತೆಗೆ ಒಡಿಶಾದಲ್ಲಿ ವಿಧಾನಸಭೆ ಚುನಾವಣೆಯೂ ಈ ವರ್ಷವೇ ನಡೆಯಲಿದೆ.