ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ | ಇತಿಹಾಸ ತಿದ್ದುವುದು ಅಪಾಯಕಾರಿ: ಸಚಿವ ರೈ
ಮಂಗಳೂರು : ಭಾರತದ ಭವಿಷ್ಯವನ್ನು ಸದೃಢವಾಗಿ ಕಟ್ಟಬೇಕಾದರೆ ಇತಿಹಾಸವನ್ನು ಮರೆಯಬಾರದು ಮತ್ತು ತಿರುಚಬಾರದು. ದೇಶಕ್ಕಾಗಿ ಹೋರಾಟ ಮಾಡಿದವರನ್ನು ಮರೆಯಬಾರದು. ಆದರೆ ಇತಿಹಾಸವನ್ನೇ ತಿದ್ದುವ ಕೆಲಸಕ್ಕೆ ಕೆಲವರು ಕೈಹಾಕಿದ್ದಾರೆ. ಇದು ಅಪಾಯಕಾರಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆತಂಕ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಇತಿಹಾಸಕಾರರು ಸ್ವಾರ್ಥ, ಸ್ವಂತಿಕೆಯ ವಿಚಾರಗಳಿಲ್ಲದೆ ಸತ್ಯ ಸಂಗತಿಗಳನ್ನೇ ಬರೆಯುತ್ತಿದ್ದರು. ಆದರೆ ಈಗಿನ ಇತಿಹಾಸಕಾರರು ಮೂಗಿನ ನೇರಕ್ಕೇ ಬರೆಯುತ್ತಾರೆ. ಟಿಪ್ಪು ಸುಲ್ತಾನ್ ಸೇರಿದಂತೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಅವರ ಇತಿಹಾಸವನ್ನೂ ತಿದ್ದಲು ಹೊರಟಿದ್ದಾರೆ. ಆದರೆ ಇತಿಹಾಸ ಇತಿಹಾಸವೇ. ಅದನ್ನು ತಿದ್ದಲಾಗದು ಎಂದು ಅಭಿಪ್ರಾಯಪಟ್ಟರು.
ಟಿಪ್ಪು ಜಯಂತಿಯನ್ನು ಸರ್ಕಾರ ಯಾವಾಗ ಆಚರಿಸಲು ಶುರು ಮಾಡಿತೋ ಅಂದಿನಿಂದಲೇ ಟೀಕೆಗಳು ಆರಂಭವಾದವು. ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ, ಮತಾಂಧ ಎಂದು ಬಿಂಬಿಸುವ ಕೆಲಸಗಳು ನಡೆದವು. ಇತಿಹಾಸ ಸೃಷ್ಟಿಸಿದ ಟಿಪ್ಪುವಿನ ಹೆಸರು ಕೆಡಿಸುವ ಯತ್ನ ನಡೆಯಿತು. ಹಿಂದೆ ಕೆಲವರು ಟಿಪ್ಪುವಿನ ವೇಷ ಹಾಕಿ ಈಗ ಜಯಂತಿಗೆ ವಿರೋಧ ಮಾಡುತ್ತಿದ್ದಾರೆ. ರಾಜಕೀಯವಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ನಾಯಕರ ಹೆಸರೆತ್ತದೆ ರೈ ಟೀಕಿಸಿದರು.
ಟಿಪ್ಪು ವಿರೋಧಿಗಳ ಕೊಡುಗೆ: ಆಹಾರ ಸಚಿವ ಯು.ಟಿ. ಖಾದರ್ ಮಾತನಾಡಿ, ಟಿಪ್ಪು ಜಯಂತಿಗೆ ವಿರೋಧ ಬಂದಿದ್ದರಿಂದಲೇ ಟಿಪ್ಪುವಿನ ಒಳ್ಳೆಯ ಕೆಲಸಗಳ ಕುರಿತು ಜನರಿಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಟಿಪ್ಪುವಿನ ಕುರಿತು ಒಂದು ಕೆಟ್ಟ ಮಾತು ಬಂದರೆ 10 ಒಳ್ಳೆಯ ಮಾತುಗಳು ಬಂದವು. ಇದು ಟಿಪ್ಪು ಜಯಂತಿ ವಿರೋಧಿಗಳ ಕೊಡುಗೆ ಎಂದು ಹೇಳಿದರು.
ಜಯಂತಿ ಆಚರಣೆ ಮಾಡುವುದು ಇಸ್ಲಾಂ ಸಂಸ್ಕೃತಿಯಲ್ಲ ಎಂದು ಕೆಲವರು ಜರೆದರು. ಆದರೆ ಇಸ್ಲಾಂ ಸಂಸ್ಕೃತಿಗಿಂತಲೂ, ಜಯಂತಿ ಆಚರಣೆ ಮಾಡುವುದು ಭಾರತೀಯ ಸಂಸ್ಕೃತಿ. ರಾಜರನ್ನು ಧರ್ಮಕ್ಕೆ ಸೀಮಿತಗೊಳಿಸಬಾರದು. ಗಾಂಧೀಜಿಯನ್ನೇ ಟೀಕಿಸಿ, ಅವರನ್ನು ಕೊಂದವನನ್ನು ವೈಭವೀಕರಿಸುವವರಿಂದ ಬೇರೇನೂ ಅಪೇಕ್ಷೆ ಮಾಡಲು ಸಾಧ್ಯವಿಲ್ಲ. ಜೀವಂತ ಇರುವ ಮಾನವರ ಕುರಿತು ಕಾಳಜಿ ಇಲ್ಲದವರು ಸತ್ತವರ ಕುರಿತು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ತೀರ್ಪು ನೀಡಲು ಅರ್ಹರಿಲ್ಲ: ಶಾಸಕ ಜೆ.ಆರ್. ಲೋಬೊ ಮಾತನಾಡಿ, ಆಡಳಿತ ಮಾಡುವಾಗ ಎಲ್ಲ ತೀರ್ಮಾನಗಳನ್ನು ಬೇಕಾದಂತೆ ಮಾಡಲಾಗದು. ಅದೇ ರೀತಿ ಟಿಪ್ಪು ಆಡಳಿತದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿರಬಹುದು. ಆದರೆ ಬಹುತೇಕ ಉತ್ತಮ ಕೆಲಸಗಳನ್ನೇ ಮಾಡಿದ್ದಾರೆ. ಸಮಾಜದಲ್ಲಿ ತಪ್ಪು ಮಾಡದೆ ಇರುವವರು ಯಾರಿದ್ದಾರೆ? ತಪ್ಪು ಮಾಡಿದವರು ಇನ್ನೊಬ್ಬರ ಕುರಿತು ತೀರ್ಪು ನೀಡಲು ಅರ್ಹರಲ್ಲ. ಜನರನ್ನು ಒಡೆಯಲು ಪ್ರಯತ್ನಿಸುವುದು ಸರಿಯಲ್ಲ ಎಂದು ಹೇಳಿದರು.
ವಾರ್ತಾ ಇಲಾಖೆ ವತಿಯಿಂದ ಹೊರತರಲಾದ ಟಿಪ್ಪು ಕುರಿತ ಕಿರು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಶಾಸಕರಾದ ಶಕುಂತಳಾ ಶೆಟ್ಟಿ, ಮೊಹಿಯುದ್ದೀನ್ ಬಾವ, ಮೇಯರ್ ಕವಿತಾ ಸನಿಲ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಗೇರು ನಿಗಮ ಅಧ್ಯಕ್ಷ ಬಿ. ಎಚ್. ಖಾದರ್, ತುಳು ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ. ಸಿಇಒ ಡಾ.ಎಂ.ಆರ್.ರವಿ, ಲೇಖಕ- ಚಿಂತಕ ಅರವಿಂದ ಚೊಕ್ಕಾಡಿ ಇದ್ದರು.
‘ಟಿಪ್ಪು ಸ್ವಾಭಿಮಾನದ ಪ್ರತೀಕ’
ದಾಸ್ಯಕ್ಕೆ ನಾವು ಬಗ್ಗುವುದಿಲ್ಲ ಎಂಬ ಇತಿಹಾಸದ ತಾತ್ವಿಕ ಪರಂಪರೆಯ ಮನೋಧರ್ಮವನ್ನು ದೊಡ್ಡ ಮಟ್ಟದಲ್ಲಿ ಎತ್ತಿ ಹಿಡಿದ ಕೀರ್ತಿ ಟಿಪ್ಪು ಸುಲ್ತಾನ್ ಅವರದ್ದು. ಟಿಪ್ಪು ಎಂದರೆ ಸ್ವಾಭಿಮಾನದ ಪ್ರತೀಕ ಎಂದು ಲೇಖಕ, ಚಿಂತಕ ಅರವಿಂದ ಚೊಕ್ಕಾಡಿ ವಿಶ್ಲೇಷಿಸಿದ್ದಾರೆ. ಟಿಪ್ಪು ಜಯಂತಿಯ ಸಂದೇಶ ನೀಡಿದ ಅವರು, ಬ್ರಿಟಿಷರ ದಾಸ್ಯ ಮುಕ್ತಿಗಾಗಿ ಟಿಪ್ಪು ಸುಲ್ತಾನ್ ಬಾಂಗ್ಲಾ ದೇಶದ ಸಣ್ಣ ರಾಜನೊಬ್ಬನಿಗೆ ಪತ್ರ ಬರೆದಿದ್ದ. ಸಹಾಯ ಮಾಡುವುದಿಲ್ಲ ಎಂದು ಗೊತ್ತಿದ್ದೂ ಮೊಘಲ್ ಬಾದಶಹನಿಗೆ ಪತ್ರ ಬರೆದಿದ್ದ. ದೇಶದೊಳಗಿನ ರಾಜರುಗಳನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡುವ ಇರಾದೆಯನ್ನು ಹೊಂದಿದ್ದ. ಆದರೆ ಜನತಾ ಬಂಡಾಯವಿಲ್ಲದ ರಾಜಕೇಂದ್ರಿತ ಹೋರಾಟ ಅದಾಗಿದ್ದರಿಂದ ಸಫಲವಾಗಲಿಲ್ಲ. ಆದರೆ ದಾಸ್ಯದ ವಿರುದ್ಧ ಸಿಡಿದೇಳುವ ನೀತಿ ಆತ ಕೊಟ್ಟ ಬಹುದೊಡ್ಡ ಸಂದೇಶ ಎಂದು ಹೇಳಿದರು.
ರಾಜನಾಗಿದ್ದರೂ ಪ್ರಜಾಪ್ರಭುತ್ವದ ಮೇಲಿನ ಸಣ್ಣ ಮಟ್ಟದ ಪ್ರೀತಿ ಟಿಪ್ಪುವಿಗಿತ್ತು. ದಲಿತರು ಭೂಮಿ ಉಳಬಾರದು ಎನ್ನುವ ಮೂಢನಂಬಿಕೆಯಿದ್ದ ಕಾಲದಲ್ಲೂ ದಲಿತರಿಗೆ ಭೂಮಿ ಹಂಚಿ ಆಡಳಿತಾತ್ಮಕ ಸುಧಾರಣೆಯ ಅಗತ್ಯತೆಯ ಸಂದೇಶ ಸಾರಿದ್ದಾನೆ ಎಂದು ಉದಾಹರಣೆಗಳ ಸಹಿತ ಪ್ರತಿಪಾದಿಸಿದರು.
