ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿಯಲ್ಲಿ ನೀಡಿದ್ದ ಮೀಸಲಾತಿ ರದ್ದುಪಡಿಸಿ ಸುಪ್ರಿಂಕೋರ್ಟ್ ನೀಡಿದ್ದ ಆದೇಶದ ಅನ್ವಯ ಎಲ್ಲ ಇಲಾಖೆಗಳ ನೌಕರರ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ನೀಡಿದ್ದ ಗಡುವು ನವೆಂಬರ್ 30ಕ್ಕೆ ಮುಗಿದಿದೆ.

ಬೆಂಗಳೂರು: ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿಯಲ್ಲಿ ನೀಡಿದ್ದ ಮೀಸಲಾತಿ ರದ್ದುಪಡಿಸಿ ಸುಪ್ರಿಂಕೋರ್ಟ್ ನೀಡಿದ್ದ ಆದೇಶದ ಅನ್ವಯ ಎಲ್ಲ ಇಲಾಖೆಗಳ ನೌಕರರ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಲು ನೀಡಿದ್ದ ಗಡುವು ನವೆಂಬರ್ 30ಕ್ಕೆ ಮುಗಿದಿದೆ. ಆದಾಗ್ಯೂ ಸರಕಾರ ಪ್ರಕ್ರಿಯೆ ಮುಗಿಸದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಲು ಸರ್ಕಾರದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗದ (ಅಹಿಂಸಾ) ನೌಕರರ ಸಂಘ ನಿರ್ಧರಿಸಿದೆ.

ಈ ಕುರಿತು ಡಿಸೆಂಬರ್ 3ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಕೆ.ಆರ್.ಸರ್ಕಲ್‌ನಲ್ಲಿರುವ ಎಂಜಿನಿಯರ್ಸ್‌ ಇನ್’ಸ್ಟಿಟ್ಯೂಟ್ ಹಾಲ್‌ನಲ್ಲಿ ಅಹಿಂಸಾ ಸದಸ್ಯರ ಸಭೆ ಕರೆಯಲಾಗಿದೆ ಎಂದು ಸಂಘಟನೆ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.

ವಿಧಾನಮಂಡಲದಲ್ಲಿ ವಿಧೇಯಕ ಅಂಗೀಕರಿಸಿ ರಾಜ್ಯ ಪಾಲರಿಗೆ ಕಳಿಸಿದ್ದಾರೆ. ನಾವು ರಾಜ್ಯಪಾಲರಿಗೆ ಅಂಕಿತ ಹಾಕದಂತೆ ಮನವಿ ಮಾಡಿದ್ದೇವೆ. ಸುಪ್ರಿಂಕೋರ್ಟ್ ಈಗಾಗಲೇ ರದ್ದುಪಡಿಸಿ ಆದೇಶ ನೀಡಿದೆ. ಆದಾಗ್ಯೂ ವಿಧೇಯಕ ಅಂಗೀಕರಿಸಿರುವುದು ಸುಪ್ರಿಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾವೇರಿ ನದಿ ನೀರಿನ ವಿಚಾರದಲ್ಲೂ ವಿಧೇಯಕ ಅಂಗೀಕರಸಬಹುದಿತ್ತು. ಅದನ್ನು ಬಿಟ್ಟು ನೀರಿನ್ನೇಕೆ ಬಿಡುಗಡೆ ಮಾಡಿದರು. ರಾಜಕೀಯ ಕಾರಣಕ್ಕಾಗಿ ಮೊಸಳೆ ಕಣ್ಣಿರು ಸುರಿಸುವ ಕೆಲಸ ಇದಾಗಿದೆ. ಈ ವಿಧೇಯಕಕ್ಕೆ ಕಾನೂನು ಬೆಂಬಲ ಇಲ್ಲ. ಹೀಗಾಗಿ ವಿಧಾನಮಂಡಲ ಅಂಗೀಕರಿಸಿರುವ ವಿಧೇಯಕದ ಕುರಿತಂತೆ ರಾಜ್ಯಪಾಲರು ಕಾನೂನು ಸಲಹೆ ಪಡೆದು ಮುಂದಿನ ಕ್ರಮಕೈಗೊಳ್ಳಬೇಕು. ಭಾನುವಾರ ನಡೆಯುವ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಸುಪ್ರಿಂಕೋರ್ಟ್ ಫೆ.9ರಂದು ಆದೇಶ ನೀಡಿದಾಗ 6 ತಿಂಗಳ ಕಾಲಾವಕಾಶವನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು. ಆ ಅವಧಿಯೊಳಗೆ ರಾಜ್ಯ ಸರ್ಕಾರ ಆದೇಶ ಪಾಲನೆ ಮಾಡಿರಲಿಲ್ಲ. ಆಗ ಅಹಿಂಸಾದಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದೆವು. ಆಗ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ಎದುರು ಮತ್ತಷ್ಟು ಕಾಲಾವಕಾಶ ಕೋರಿ ಮನವಿ ಮಾಡಿತ್ತು. ಸುಪ್ರಿಂಕೋರ್ಟ್ ನಮ್ಮ ನ್ಯಾಯಾಂಗ ನಿಂದನಾ ಅರ್ಜಿ ಬಾಕಿ ಇರಿಸಿ, ಸರಕಾರಕ್ಕೆ ನವೆಂಬರ್ 30ರ ಒಳಗೆ ಜ್ಯೇಷ್ಠತಾ ಪಟ್ಟಿ ತಯಾರಿಸಲು ಗಡುವು ನೀಡಿತ್ತು.

ಅಲ್ಲದೇ ಜನವರಿ 15ರ ಒಳಗೆ ಈಗಾಗಲೇ ನೀಡಿರುವ ಬಡ್ತಿಗಳನ್ನು ವಾಪಸ್ ಪಡೆದು ಮರು ಪಟ್ಟಿ ಪ್ರಕಟಿಸುವಂತೆ ಕೂಡ ಸೂಚನೆ ನೀಡಿತ್ತು. ಆದರೆ ನವೆಂಬರ್ 30 ಕೊನೆಗೊಂಡರೂ ರಾಜ್ಯ ಸರ್ಕಾರ ಜ್ಯೇಷ್ಠತಾ ಪಟ್ಟಿಯನ್ನೇ ಸಿದ್ಧಪಡಿಸಿಲ್ಲ. ಹೀಗಾಗಿ ಮತ್ತೊಮ್ಮೆ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸುತ್ತೇವೆ ಎಂದು ನಾಗರಾಜ್ ಹೇಳಿದ್ದಾರೆ.