ಬರಾಕ್‌ ಒಬಾಮಾ ಮತ್ತು 2016ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್‌ಗೆ ಶಂಕಿತ ಸ್ಫೋಟಕ ಪದಾರ್ಥಗಳನ್ನು ಒಳಗೊಂಡ ಪಾರ್ಸೆಲ್‌ ಬಾಂಬ್‌ ಕಳುಹಿಸಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.  

ವಾಷಿಂಗ್ಟನ್‌/ನ್ಯೂಯಾರ್ಕ್: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಮತ್ತು 2016ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್‌ಗೆ ಶಂಕಿತ ಸ್ಫೋಟಕ ಪದಾರ್ಥಗಳನ್ನು ಒಳಗೊಂಡ ಪಾರ್ಸೆಲ್‌ ಬಾಂಬ್‌ ಕಳುಹಿಸಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ಆದರೆ ಅಮೆರಿಕದಲ್ಲಿ ಗಣ್ಯರ ರಕ್ಷಣೆ ಉಸ್ತುವಾರಿ ಹೊತ್ತಿರುವ ಸೀಕ್ರೆಟ್‌ ಸವೀರ್‍ಸ್‌ನ ಅಧಿಕಾರಿಗಳು ಈ ಸ್ಫೋಟಕ ವಸ್ತುಗಳನ್ನು ತಪಾಸಣೆ ಹಂತದಲ್ಲೇ ಪತ್ತೆ ಮಾಡಿದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

ಈ ನಡುವೆ ಬುಧವಾರ ಬೆಳಗ್ಗೆ ನ್ಯೂಯಾರ್ಕ್ನಲ್ಲಿ ಸಿಎನ್‌ಎನ್‌ ಸುದ್ದಿವಾಹಿನಿ ಕಚೇರಿಯಲ್ಲೂ ಅನುಮಾನಾಸ್ಪದ ವಸ್ತುಗಳನ್ನು ಒಳಗೊಂಡ ಪಾರ್ಸೆಲ್‌ ಪತ್ತೆಯಾದ ಕಾರಣ, ಇಡೀ ಕಚೇರಿಯನ್ನು ತೆರವುಗೊಳಿಸಿ, ಪರಿಶೀಲನೆ ನಡೆಸಲಾಗುತ್ತಿದೆ. 3 ದಿನಗಳ ಹಿಂದಷ್ಟೇ ಡೆಮಾಕ್ರೆಟ್‌ ಪಕ್ಷದ ದಾನಿ ಜಾಜ್‌ರ್‍ ಸೊರೊಸ್‌ ಮನೆ ಬಳಿಯೂ ಇಂಥದ್ದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿತ್ತು. ಹೀಗೆ ವಾರದ ಅವಧಿಯಲ್ಲಿ ರಾಜಕೀಯ ನಾಯಕರನ್ನೇ ಗುರಿಯಾಗಿಸಿ ನಾಲ್ಕು ಪಾರ್ಸೆಲ್‌ ಬಾಂಬ್‌ ಪತ್ತೆಯಾದ ಹಿನ್ನೆಲೆಯಲ್ಲಿ, ಅಮೆರಿಕದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಈ ಪ್ರಕರಣಗಳ ಕುರಿತು ತನಿಖೆಯನ್ನೂ ಆರಂಭಿಸಲಾಗಿದೆ.

ಸ್ಫೋಟಕ ಪಾರ್ಸೆಲ್‌: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರನ್ನು ಉದ್ದೇಶಿಸಿ ಕಳುಹಿಸಲಾಗಿದ್ದ ಸಂಭಾವ್ಯ ಸ್ಫೋಟಕ ಪದಾರ್ಥ ಒಳಗೊಂಡಿದ್ದ ಪಾರ್ಸೆಲ್‌ ಒಂದನ್ನು ಬುಧವಾರ ವಾಷಿಂಗ್ಟನ್‌ ಡಿಸಿಯಲ್ಲಿ ಪತ್ತೆ ಹಚ್ಚಲಾಗಿದೆ. ಇನ್ನೊಂದೆಡೆ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ರ ಪತ್ನಿ ಹಿಲರಿ ಕ್ಲಿಂಟನ್‌ ಅವರಿಗೆ ರವಾನಿಸಲಾಗಿದ್ದ ಸ್ಫೋಟಕ ಪದಾರ್ಥಗಳನ್ನು ಒಳಗೊಂಡಿದ್ದ ಪಾರ್ಸೆಲ್‌ ಅನ್ನು ಮಂಗಳವಾರ ನ್ಯೂಯಾರ್ಕ್ನಲ್ಲಿರುವ ಮನೆಯ ಸಮೀಪದಲ್ಲಿಯೇ ಪತ್ತೆ ಹಚ್ಚಲಾಗಿದೆ.

ಸಾಮಾನ್ಯ ತಪಾಸಣೆ ವೇಳೆ ಈ ಪಾರ್ಸೆಲ್‌ಗಳಲ್ಲಿ ಕೆಲವೊಂದು ರಾಸಾಯನಿಕ ಪೌಡರ್‌ ಮತ್ತು ಬಾಂಬ್‌ ತಯಾರಿಕೆಯಲ್ಲಿ ಬಳಸುವ ಉಪಕರಣಗಳು ಪತ್ತೆಯಾಗಿವೆ. ಕೂಡಲೇ ಸ್ಥಳಕ್ಕೆ ಸ್ಫೋಟಕ ನಿಷ್ಕಿ್ರಯ ತಜ್ಞರನ್ನು ಕರೆಸಿ, ಅದನ್ನು ಸೂಕ್ತರೀತಿಯಲ್ಲಿ ನಿರ್ವಹಿಸಲಾಯಿತು ಎಂದು ಭದ್ರತಾ ಸಂಸ್ಥೆಗಳು ಖಚಿತಪಡಿಸಿವೆ. ಜೊತೆಗೆ ಎರಡೂ ಪಾರ್ಸೆಲ್‌ಗಳನ್ನು ಅವು ತಲುಪಬೇಕಾದ ಸ್ಥಳ ತಲುಪುವ ಮುನ್ನವೇ ಪತ್ತೆಹಚ್ಚಲಾಗಿದೆ. ಜೊತೆಗೆ ಈ ಪಾರ್ಸೆಲ್‌ಗಳನ್ನು ಗಣ್ಯರು ಸ್ವತಃ ಸ್ವೀಕರಿಸುವ ಅಪಾಯವೂ ಇರಲಿಲ್ಲ ಎಂದು ಸೀರ್ಕೆಟ್‌ ಸವೀರ್‍ಸ್‌ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಅಮೆರಿಕದ ಅಧ್ಯಕ್ಷರು ವಾಸಿರುವ ಶ್ವೇತಭವನಕ್ಕೂ ಪೈಪ್‌ ಬಾಂಬ್‌ ರವಾನಿಸಲಾಗಿತ್ತು ಎಂದು ವರದಿಯಾಗಿತ್ತಾದರೂ, ಅದನ್ನು ಶ್ವೇತಭವನದ ಮೂಲಗಳು ನಿರಾಕರಿಸಿವೆ. ಜೊತೆಗೆ ಒಬಾಮಾ, ಹಿಲರಿ ಕ್ಲಿಂಟನ್‌ ಸೇರಿದಂತೆ ಗಣ್ಯರಿಗೆ ಪಾರ್ಸೆಲ್‌ ಬಾಂಬ್‌ ಕಳುಹಿಸುವ ಮೂಲಕ ಹಿಂಸಾತ್ಮಕ ದಾಳಿಯ ಯತ್ನವನ್ನೂ ಶ್ವೇತಭವನ ಖಂಡಿಸಿದೆ.