ದಾವಣಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟ್ಯಾಫ್ ನರ್ಸ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾವಿನ ಹಿಂದೆ ಕಾಣದ ಪ್ರಭಾವಿಗಳ ಕೈವಾಡವಿದೆ ಎಂಬ ಸಂಶಯ ಕಾಡುತ್ತಿದೆ. ಹಲವು ಅನುಮಾನಗಳಿಗೆ ಎಡೆ ಮಾಡಿರುವ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ.
ದಾವಣಗೆರೆ(ಜು.10): ದಾವಣಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟ್ಯಾಫ್ ನರ್ಸ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾವಿನ ಹಿಂದೆ ಕಾಣದ ಪ್ರಭಾವಿಗಳ ಕೈವಾಡವಿದೆ ಎಂಬ ಸಂಶಯ ಕಾಡುತ್ತಿದೆ. ಹಲವು ಅನುಮಾನಗಳಿಗೆ ಎಡೆ ಮಾಡಿರುವ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ.
55 ವರ್ಷದ ಗಿರಿಜಮ್ಮ ಕಳೆದ 15 ವರ್ಷಗಳಿಂದ ತ್ಯಾವಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಚನ್ನಾಗೇ ಇದ್ದ ಗಿರಿಜಮ್ಮ ತಮ್ಮ ಮನೆಯಲ್ಲಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾತ್ರಿ ಊಟ ಮಾಡಿ ಮಲಗಿದ್ದ ಗಿರಿಜಮ್ಮ ಬೆಳಗ್ಗೆ ಹೆಣವಾಗಿದ್ದಾರೆ. ಗಿರಿಜಮ್ಮ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗುತ್ತಿದೆ.
ಕಳೆದ ಐದಾರು ತಿಂಗಳನಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತರು ಹಾಗೂ ಗಿರಿಜಮ್ಮ ನ ನಡುವೆ ಕೆಲಸದ ವಿಷಯವಾಗಿ ವೈಮನಸ್ಸಿತ್ತು. ಈ ಬಗ್ಗೆ ಗಿರಿಜಮ್ಮ ತಮ್ಮ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಅಧಿಕಾರಿಗಳು ಕಳೆದ ಶುಕ್ರವಾರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಶಾ ಕಾರ್ಯಕರ್ತರೊಂದಿಗಿನ ನಡವಳಿಕೆಗಳ ಬಗ್ಗೆ ಸಂಧಾನ ಮಾಡಿದ್ದರು. ಇದೇ ವೈಮನಸ್ಸಿನಿಂದ ಬೇಸತ್ತ ಗಿರಿಜಮ್ಮ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಗಿರಿಜಮ್ಮ ಸಾಯುವ ಮುನ್ನ ಡೆತ್ ನೋಟ್ ನ್ನು ಬರೆದಿದ್ದು ಅದರಲ್ಲಿ ಕೆಲ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರ ಹೆಸರುಗಳಿವೆ ಎಂದೂ ಹೇಳಲಾಗುತ್ತಿದೆ. ಪತಿಯನ್ನು ಬೆದರಿಸಿ ಸಹಜ ಸಾವು ಎಂದು ಬಿಂಬಿಸುತ್ತಿದ್ದಾರೆ ಎಂದೂ ಸಂಬಂಧಿಕರು ಆರೋಪಿಸುತ್ತಿದ್ದಾರೆ. ತನಿಖೆಯಿಂದಷ್ಟೇ ಗಿರಿಜಮ್ಮ ಸಾವಿನ ಸತ್ಯ ಬಯಲಾಗಬೇಕಿದೆ.
