ಪಾಪಿ ನರ್ಸ್ ರೋಗಿಗಳಿಗೆ ಓವರ್‌ಡೋಸ್ ನೀಡಿ ಕೃತ್ಯ

ಬರ್ಲಿನ್: ರೋಗಿಗಳ ಪಾಲಿಗೆ ದೇವರಾಗಬೇಕಿದ್ದ ನರ್ಸ್, ಸ್ವತಃ 100ಕ್ಕೂ ಹೆಚ್ಚು ರೋಗಿಗಳನ್ನು ಹತ್ಯೆ ಮಾಡಿದ ಭೀಕರ ಘಟನೆ ಜರ್ಮನಿಯಲ್ಲಿ ನಡೆದಿದೆ.

ಇದುವರೆಗಿನ ಲೆಕ್ಕಾಚಾರದ ಪ್ರಕಾರ 106 ಜನರು ನೀಲ್ಸ್ ಹೋಗೆಲ್ ಎಂಬ ನರ್ಸ್‌ನ ದುರಳ ಕೃತ್ಯಕ್ಕೆ ಬಲಿಯಾಗಿರುವುದು ಖಚಿತಪಟ್ಟಿದೆ.

1999-2005ರ ಅವಧಿಯಲ್ಲಿ ಜರ್ಮನಿಯ 2 ಆಸ್ಪತ್ರೆಗಳಲ್ಲಿ ನೀಲ್ಸ್ ನರ್ಸ್ ಆಗಿ ಕಾರ್ಯ ನಿರ್ವಹಿಸಿದ್ದ. ಈತ ಕಾರ್ಯನಿರ್ವಹಿಸುತ್ತಿದ್ದ ಶಿಫ್ಟ್‌ನಲ್ಲೇ ಹೆಚ್ಚಿನ ರೋಗಿಗಳು ಸಾವನ್ನಪ್ಪುತ್ತಿದ್ದರು. ಒಮ್ಮೆ ಇನ್ನೊಬ್ಬ ನರ್ಸ್ ಈ ಬಗ್ಗೆ ಅನುಮಾನ ಬಂದು ತಪಾಸಣೆ ನಡೆಸಿದ ವೇಳೆ ಈ ದುಷ್ಕೃತ್ಯ ಬಯಲಾಗಿತ್ತು.

ಬಳಿಕ ಇತರ ಪ್ರಕರಣಗಳು ಬೆಳಕಿಗೆ ಬಂದಿವೆ. ನೀಲ್ಸ್ ಗೆ ವಿಚಿತ್ರ ಖಯಾಲಿ ಇತ್ತು. ಕೆಲವೊಮ್ಮೆ ಬೇಜಾರಾಯಿತೆಂದು ರೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಔಷಧ ಕೊಡುತ್ತಿದ್ದ.

ಇನ್ನೊಮ್ಮೆ ಹೀಗೆ ಮಾಡಬಾರದು ಎಂದು ಅಂದುಕೊಳ್ಳುತ್ತಿದ್ದನಂತೆ. ಆದರೆ ಕೆಲ ದಿನಗಳ ಬಳಿಕ ಅದೇ ಮನಸ್ಥಿತಿಗೆ ಮರಳುತ್ತಿದ್ದನಂತೆ. ಈ ವಿಷಯವನ್ನು ಆತನೇ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಸದ್ಯ 2 ಹತ್ಯೆ ಪ್ರಕರಣಗಳಲ್ಲಿ ನೀಲ್ಸ್‌ಗೆ ಜೀವಾವಧಿ ಶಿಕ್ಷೆಯಾಗಿದೆ.

(ಸಾಂದರ್ಭಿಕ ಚಿತ್ರ)