ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಾಕಿಸ್ತಾನ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ, ಲಷ್ಕರ್ ಉಗ್ರ ಸಯೀದ್‌ನ ದತ್ತಿ ಸಂಸ್ಥೆ ಆದ ಜಮಾತ್ ಉದ್ ದಾವಾ ಸಂಘಟನೆ ಹಾಗೂ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿರುವ ವಿವಿಧ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನದ ಹಣಕಾಸು ನಿಯಂತ್ರಣ ಸಂಸ್ಥೆಯಾದ ಎಸ್‌ಇಸಿಪಿ ನಿಷೇಧ ಹೇರಿದೆ.
ಇಸ್ಲಾಮಾಬಾದ್ (ಜ.2): 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಾಕಿಸ್ತಾನ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ, ಲಷ್ಕರ್ ಉಗ್ರ ಸಯೀದ್ನ ದತ್ತಿ ಸಂಸ್ಥೆ ಆದ ಜಮಾತ್ ಉದ್ ದಾವಾ ಸಂಘಟನೆ ಹಾಗೂ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿರುವ ವಿವಿಧ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನದ ಹಣಕಾಸು ನಿಯಂತ್ರಣ ಸಂಸ್ಥೆಯಾದ ಎಸ್ಇಸಿಪಿ ನಿಷೇಧ ಹೇರಿದೆ. ಇದರಿಂದಾಗಿ ಉಗ್ರ ಚಟುವಟಿಕೆಗಳಿಗೆ ಬೇರೆ ಬೇರೆ ಹೆಸರಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿದ್ದ ಸಯೀದ್ಗೆ ಭಾರೀ ಹೊಡೆತ ಬೀಳಲಿದೆ ಎಂದು ಹೇಳಲಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿಷೇಧಿತ ಪಟ್ಟಿಯಲ್ಲಿರುವ ಉಗ್ರಗಾಮಿ ಸಂಘಟನೆಗಳಿಗೆ ಯಾವುದೇ ಕಂಪನಿಗಳು ಆರ್ಥಿಕ ನೆರವು ಇಲ್ಲವೇ ದೇಣಿಗೆ ನೀಡುವುದನ್ನು ಎಸ್ಇಸಿಪಿ ನಿಷೇಧಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜೆಯುಡಿ ಜೊತೆಗೆ ಫಲ್ಹಾ ಇ ಇನ್ಸಾನಿಯತ್ ಫೌಂಡೇಶನ್ (ಎಫ್ಐಎಫ್), ಪಾಸ್ಬಾನ್ ಇ ಅಹ್ಲೆ ಹದಿತ್ ಹಾಗೂ ಪಾಸ್ಬಾನ್ ಇ ಕಾಶ್ಮೀರ್ ಸಂಘಟನೆಗಳಿಗೂ ನಿಷೇಧ ಹೇರಲಾಗಿದೆ.
ಒಂದು ವೇಳೆ ಆದೇಶವನ್ನು ಪಾಲನೆ ಮಾಡದೇ ಇದ್ದರೆ ಭಾರೀ ದಂಡ ವಿಧಿಸಬೇಕಾದೀತು ಎಂದು ಎಸ್ಇಸಿಪಿ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ಸರ್ಕಾರವೇ ಹೇಳಿರುವಂತೆ ನಿಷೇಧಿತ ಉಗ್ರಗಾಮಿ ಸಂಘಟನೆಗಳಿಗೆ ಒಂದು ಕೋಟಿ ರು. ವರೆಗೂ ದಂಡ ವಿಧಿಸುವುದಕ್ಕೆ ಅವಕಾಶವಿದೆ. ಜಮಾತ್ ಉದ್ ದಾವಾ ಹಾಗೂ ಎಫ್ಐಎಫ್ ಸಂಘಟನೆಗಳನ್ನು ಜಾಗತಿಕ ಭಯೋತ್ಪಾದಕ ಸಂಘಟನೆಗಳೆಂದು ಅಮೆರಿಕ ಘೋಷಿಸಿದೆ.
ಒಂದೆಡೆ ಭಾರತ, ಅಮೆರಿಕ ಹಾಗೂ ವಿಶ್ವದ ಅನೇಕ ದೇಶಗಳ ಒತ್ತಡದ ನಡುವೆಯೂ ಇತ್ತೀಚೆಗೆ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ನನ್ನು ಪಾಕಿಸ್ತಾನವು ಬಂಧನದಿಂದ ಬಿಡುಗಡೆ ಮಾಡಿತ್ತು. ಆದರೆ ಈಗ ವಿಶ್ವದ ಒತ್ತಡಕ್ಕೆ ಒಳಗಾಗಿಯೋ ಏನೋ ಸಯೀದ್ನ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಾಕ್ ಸಿದ್ಧತೆ ನಡೆಸಿದೆ. ಸುದ್ದಿಸಂಸ್ಥೆಯೊಂದಕ್ಕೆ ದೊರಕಿದ ಪಾಕಿಸ್ತಾನ ಸರ್ಕಾರದ ರಹಸ್ಯ ಟಿಪ್ಪಣಿಯಲ್ಲಿ ಈ ಸಂಗತಿ ಇದೆ. ಡಿಸೆಂಬರ್ 19ರಂದು ‘ಸೀಕ್ರೆಟ್’ ಎಂದು ಬರೆದು ಪಾಕಿಸ್ತಾನದ ಹಣಕಾಸು ಸಚಿವಾಲಯವು ಪಾಕಿಸ್ತಾನದ 5 ಪ್ರಾಂತೀಯ ಸರ್ಕಾರಗಳು ಹಾಗೂ ಪೊಲೀಸ್ ಇಲಾಖೆಗೆ ಪತ್ರಗಳನ್ನು ಬರೆದಿದೆ. ಡಿಸೆಂಬರ್ 28ರೊಳಗೆ ಹಫೀಜ್ ಸಯೀದ್ಗೆ ಸೇರಿದ ಜಮಾತ್ ಉದ್ ದಾವಾ ಹಾಗೂ ಫಲಾಹ್ ಎ ಇನ್ಸಾಯಿತ್ ಪ್ರತಿಷ್ಠಾನದ ಆಸ್ತಿಪಾಸ್ತಿಗಳ ವಿವರಗಳನ್ನು ಕಲೆಹಾಕಬೇಕು ಹಾಗೂ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು ಎಂದು ಅದರಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಬರೆಯಲಾಗಿದೆ. ಸಯೀದ್ ಮೇಲೆ ಅಮೆರಿಕ ನಿರ್ಬಂಧ ಹೇರಿದ್ದು, ಈತನ ತಲೆಗೆ ಭಾರಿ ಬಹುಮಾನವನ್ನೂ ಪ್ರಕಟಿಸಿತ್ತು.
ಭಾರತ-ಪಾಕ್ನಿಂದ ಅಣು ಘಟಕ ಮಾಹಿತಿ ವಿನಿಮಯ: ಭಾರತ ಮತ್ತು ಪಾಕಿಸ್ತಾನ, ಸೋಮವಾರ ಪರಸ್ಪರ ದೇಶಗಳಲ್ಲಿನ ಪರಮಾಣು ಘಟಕಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡವು. 1988 ರಲ್ಲಿ ಮಾಡಿಕೊಂಡ ಮತ್ತು 1991 ರಿಂದ ಜಾರಿಗೆ ಬಂದ ಒಪ್ಪಂದದ ಅನ್ವಯ, ಉಭಯ ದೇಶಗಳು ತಮ್ಮ ತಮ್ಮ ದೇಶದಲ್ಲಿ ಹೊಂದಿರುವ ಪರಮಾಣು ಘಟಕಗಳ ಕುರಿತು ಪ್ರತಿ ವರ್ಷದ ಮೊದಲ ದಿನದಂದು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತವೆ.
