ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಧ್ವನಿ ಮೂಲಕ ನಿರ್ದೇಶನ ನೀಡಿ ಏನನ್ನಾದರೂ ಹುಡುಕಲು ಇಂಗ್ಲಿಷ್ ಅಥವಾ ಹಿಂದಿಗೇ ಜೋತುಬೀಳಬೇಕಿಲ್ಲ. ಇನ್ನು ಕನ್ನಡದಲ್ಲಿ ಮಾತನಾಡಿದರೂ ಗೂಗಲ್ ಮಾಹಿತಿಗಳನ್ನು ಹುಡುಕಿ ತೆಗೆದುಕೊಡಲಿದೆ.

ನವದೆಹಲಿ(ಆ.15): ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಧ್ವನಿ ಮೂಲಕ ನಿರ್ದೇಶನ ನೀಡಿ ಏನನ್ನಾದರೂ ಹುಡುಕಲು ಇಂಗ್ಲಿಷ್ ಅಥವಾ ಹಿಂದಿಗೇ ಜೋತುಬೀಳಬೇಕಿಲ್ಲ. ಇನ್ನು ಕನ್ನಡದಲ್ಲಿ ಮಾತನಾಡಿದರೂ ಗೂಗಲ್ ಮಾಹಿತಿಗಳನ್ನು ಹುಡುಕಿ ತೆಗೆದುಕೊಡಲಿದೆ.

ಹೌದು. ಭಾರತದಲ್ಲಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಷ್ಟೇ ಇದ್ದ ‘ವಾಯ್ಸ್ ಸರ್ಚ್’ ಸೌಲಭ್ಯವನ್ನು ಗೂಗಲ್ ಕಂಪನಿ ಈಗ ಕನ್ನಡ ಸೇರಿ ೮ ಭಾಷೆಗಳಿಗೆ ವಿಸ್ತರಿಸಿದೆ. ಕನ್ನಡ, ಬಂಗಾಳಿ, ಮಲಯಾಳಂ, ತಮಿಳು, ಗುಜರಾತಿ, ಮರಾಠಿ, ತೆಲುಗು ಹಾಗೂ ಉರ್ದುವಿನಲ್ಲಿ ನಿರ್ದೇಶನ ನೀಡಿದರೂ, ಗೂಗಲ್ ಬೇಕಾದ್ದನ್ನು ಹುಡುಕಿಕೊಡುತ್ತದೆ. ಈ ಸೌಲಭ್ಯ ಸೋಮವಾರದಿಂದಲೇ ಆರಂಭವಾಗಿದೆ.

ಗೂಗಲ್ ಕೀ ಬೋರ್ಡ್ ಹಾಗೂ ಗೂಗಲ್ ಆ್ಯಪ್‌ನ ಗೂಗಲ್ ಸಚ್ನರ್ಲ್ಲಿರುವ ‘ಮೈಕ್’ ಬಟನ್ ಒತ್ತುವ ಮೂಲಕ ಕನ್ನಡದಲ್ಲೂ ಗೂಗಲ್‌'ಗೆ ಧ್ವನಿ ನಿರ್ದೇಶನ ನೀಡಬಹುದು ಎಂದು ಗೂಗಲ್ ತಾಂತ್ರಿಕ ಕಾರ್ಯಕ್ರಮ ವ್ಯವಸ್ಥಾಪಕ ಡಾನ್ ವಾನ್ ಎಶ್ಚ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರಿಗೆ ತಿಳಿಸಿದರು.

ಕನ್ನಡ ಸೇರಿ ಇತರ ಭಾಷೆಗಳಲ್ಲಿ ವಾಯ್ಸ್ ಸರ್ಚ್‌ನಲ್ಲಿ ಧ್ವನಿ ನಿರ್ದೇಶನ ನೀಡಲು ಗೂಗಲ್ ಆ್ಯಪ್‌ನಲ್ಲಿರುವ ವಾಯ್ಸ್ ಸೆಟ್ಟಿಂಗ್ಸ್‌ನಲ್ಲಿ ಆಯಾ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ವಿವರಿಸಿದರು. ವಾಯ್ಸ್ ಸರ್ಚ್‌ಗೆ ಸೋಮವಾರ 30 ಭಾಷೆಗಳನ್ನು ಗೂಗಲ್ ಹೊಸದಾಗಿ ಸೇರ್ಪಡೆ ಮಾಡಿದೆ. ಅದರಲ್ಲಿ ಕನ್ನಡ ಸೇರಿ 8 ಭಾಷೆಗಳು ಭಾರತೀಯ ಭಾಷೆಗಳಾಗಿವೆ.

ಸದ್ಯ ಗೂಗಲ್ 119 ಭಾಷೆಗಳಲ್ಲಿ ವಾಯ್ಸ್ ಸರ್ಚ್ ಸೇವೆ ಒದಗಿಸುತ್ತಿದೆ ಎಂದು ವಿವರಿಸಿದರು. ಈಗಾಗಲೇ ಅಪ್‌ಡೇಟ್ ಬಿಡುಗಡೆ ಯಾಗಿದ್ದು, ಮೈಕ್ ಬಟನ್ ಒತ್ತಿ ಸ್ಥಳೀಯ ಭಾಷೆಯಲ್ಲಿ ವಾಯ್ಸ್ ಸರ್ಚ್ ಬಳಸಬಹುದು. ಇದಕ್ಕಾಗಿ ಸ್ಥಳೀಯ ಭಾಷಿಕರ ಮಾತಿನ ಮಾದರಿಯನ್ನು ಸಂಗ್ರಹಿಸಲಾಗಿದೆ. ಹೆಚ್ಚಿನ ಮಂದಿ ಬಳಸಿದ ಬಳಿಕ ಧ್ವನಿ ನಿರ್ದೇಶನ ಮತ್ತಷ್ಟು ಉತ್ತಮಗೊಳ್ಳಲಿದೆ. ಸಾಕಷ್ಟು ಮಂದಿ ಟೈಪ್ ಮಾಡುವ ಬದಲಿಗೆ ಮಾತನಾಡುವ ಮೂಲಕವೇ ಗೂಗಲ್ ಸರ್ಚ್‌ನಲ್ಲಿ ಮಾಹಿತಿ ಹೆಕ್ಕುತ್ತಿದ್ದಾರೆ ಎಂದು ಹೇಳಿದರು.

ಸಮೀಕ್ಷೆಯ ಪ್ರಕಾರ 2021ರ ಹೊತ್ತಿಗೆ 19.9 ಕೋಟಿ ಮಂದಿ ಇಂಗ್ಲಿಷ್‌ನಲ್ಲಿ ಇಂಟರ್ನೆಟ್ ಬಳಸಿದರೆ, 53.6 ಕೋಟಿ ಭಾರತೀಯರು ಪ್ರಾದೇಶಿಕ ಭಾಷೆಗಳಲ್ಲಿ ನೆಟ್ ಬಳಸುತ್ತಾರೆ.