ಬೆಂಗಳೂರು (ಫೆ. 21):  ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿ​ವ​ರ್ತಿ​ಸಿ​ಕೊ​ಳ್ಳಲು ಅಗ​ತ್ಯ​ವಾದ ಭೂ ಪರಿ​ವ​ರ್ತನೆ ಆದೇ​ಶ​ವನ್ನು ಆನ್‌​ಲೈನ್‌ ಮೂಲ​ಕವೇ ಪಡೆ​ಯುವ ವ್ಯವ​ಸ್ಥೆ​ಯನ್ನು ರಾಜ್ಯ ಸರ್ಕಾರ ಬುಧ​ವಾ​ರ​ದಿಂದ ಜಾರಿಗೆ ತಂದಿ​ದೆ.

ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡುತ್ತಾ, ಭೂ ಪರಿ​ವ​ರ್ತನೆ ಆದೇಶ ಪಡೆ​ಯು​ವಲ್ಲಿ ಇದು​ವ​ರೆಗೂ ಆಗು​ತ್ತಿದ್ದ ವಿಳಂಬ, ವಿಪ​ರೀತ ದಾಖಲೆ ಪತ್ರ​ಗಳ ಬೇಡಿಕೆಯಂತಹ ಸಮಸ್ಯೆ ನಿವಾ​ರಿಸಿ ಇಡೀ ಪ್ರಕ್ರಿ​ಯೆಗೆ ಪಾರ​ದ​ರ್ಶ​ಕತೆ ತರಲು ಈ ಹೊಸ ವ್ಯವಸ್ಥೆ ಜಾರಿಗೆ ತರ​ಲಾ​ಗಿದೆ. ಅರ್ಜಿದಾರರು ಎದುರಿಸುತ್ತಿದ್ದ ತೊಂದರೆ, ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಲು ಭೂ ಪರಿವರ್ತನೆಯ ವಿಧಾನವನ್ನು ಅತ್ಯಂತ ಸರಳೀಕರಣಗೊಳಿಸುವ ಪದ್ಧತಿ ಇಂದಿನಿಂದ ಜಾರಿಗೆ ಬಂದಿ​ದೆ ಎಂದು ತಿಳಿಸಿದರು.

ಈವರೆಗೆ ಅರ್ಜಿ ಸಲ್ಲಿಕೆಯ ನಂತರ ಭೂ ಪರಿವರ್ತನೆಗೆ ಆರೇಳು ತಿಂಗಳು ಇಲ್ಲವೇ ಒಂದು ವರ್ಷಕ್ಕೂ ಮೇಲೆ ಸಮಯ ತೆಗೆದುಕೊಳ್ಳಲಾಗುತ್ತಿತ್ತು. 20ರಿಂದ 25 ದಾಖಲೆ ಪತ್ರ ಸಲ್ಲಿಕೆ ಜೊತೆಗೆ ಸಂಬಂಧಪಟ್ಟಹಲವಾರು ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. ಇದನ್ನು ತಪ್ಪಿಸಲು ತಂತ್ರಜ್ಞಾನವನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಜೊತೆಗೆ ಕಾಲ ಮಿತಿಯಲ್ಲಿ ಪರಿವರ್ತನೆ ಆದೇಶ ಪಡೆಯುವ ವಿಧಾನವನ್ನು ಜಾರಿಗೆ ತರಲಾಗಿದೆ ಎಂದರು.

ಭೂ ಪರಿವರ್ತನೆಗೆ ಸಲ್ಲಿಸಬೇಕಾದ ಎಲ್ಲ ದಾಖಲೆಗಳನ್ನು ಕ್ರಮಬದ್ಧವಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಿದ ನಂತರ ಅದು ತಹಶೀಲ್ದಾರ್‌ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಲಿದೆ. ನಂತರ ಸಂಬಂಧಪಟ್ಟಇಲಾಖೆ/ ಪ್ರಾಧಿಕಾರಿಗಳಿಗೆ ಅವರ ಅಭಿಪ್ರಾಯಕ್ಕಾಗಿ ಏಕಕಾಲಕ್ಕೆ ಆನ್‌ಲೈನ್‌ನಲ್ಲಿ ವರ್ಗಾವಣೆ ಆಗಲಿದೆ.

ವರ್ಗಾಯಿಸಲ್ಪಟ್ಟಇಲಾಖೆ/ಪ್ರಾಧಿಕಾರಿಗಳಿಂದ ಒಂದು ತಿಂಗಳ ಕಾಲಮಿತಿಯಲ್ಲಿ ಅಭಿಪ್ರಾಯ/ ವರದಿ ಬಾರದಿದ್ದಲ್ಲಿ ಭೂಪರಿವರ್ತನೆ ಕೋರಿಕೆ ಬಗ್ಗೆ ಅವರಿಂದ ಯಾವುದೇ ರೀತಿಯ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ಭೂ ಪರಿವರ್ತನೆಗೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ನಿಗದಿತ ಅವಧಿಯೊಳಗೆ ಅಭಿಪ್ರಾಯ/ ವರದಿ ನೀಡಲು ತಪ್ಪಿದಲ್ಲಿ ಸಂಬಂಧಪಟ್ಟಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಭೂ ಪರಿವರ್ತನೆಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಿದ ದಿನಾಂಕದಿಂದ ಆರವತ್ತು ದಿನದೊಳಗೆ ಭೂ ಪರಿವರ್ತನಾ ಆದೇಶ ಇಲ್ಲವೇ ಹಿಂಬರಹ ಹೊರಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿದಾರರು ಭೂ ಪರಿವರ್ತನೆಗೆ ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆನ್‌ಲೈನ್‌ ಮೂಲಕ ಅಥವಾ ಆನ್‌ಲೈನ್‌ನಲ್ಲಿ landrecords.karnataka.gov.in ವೆಬ್‌ಸೈಟ್‌ನ  Citizen login for revenue service link affidevit based cinversion module  ಲಿಂಕ್‌ ಮೂಲಕ ತಾವೇ ಅಕೌಂಟ್‌ ಮತ್ತು ಲಾಗಿನ್‌ ಐಡಿ ಕ್ರಿಯೇಟ್‌ ಮಾಡಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ​ಯೊಂದಿಗೆ ಸಲ್ಲಿಸಿದ ಎಲ್ಲ ದಾಖಲೆಗಳನ್ನು ಸಂಬಂಧಪಟ್ಟಇಲಾಖೆ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳು ಹೊರಡಿಸುವ ಭೂ ಪರಿವರ್ತನಾ ಆದೇಶ ಅಥವಾ ಹಿಂಬರಹವನ್ನು ಅರ್ಜಿದಾರರು ಸ್ವತಃ ತಾವೇ ಇಲಾಖೆಯ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಸಲ್ಲಿಸಬೇಕಾದ ದಾಖಲೆಗಳು

1.ಚಾಲ್ತಿ ವರ್ಷದ ಪಹಣಿ ಪತ್ರಿಕೆ 2- ಹಕ್ಕು ಬದಲಾವಣೆ ದಾಖಲಾತಿ (ಮ್ಯೂಟೇಷನ್‌ ಪ್ರತಿ) 3-11-ಇ ನಕ್ಷೆ (ಒಂದು ಸರ್ವೆ ನಂಬರಿನಲ್ಲಿ ಭಾಗಶಃ ಭೂಪರಿವರ್ತನೆಗೆ ವಿನಂತಿಸಿದ ಸಂದರ್ಭದಲ್ಲಿ ಮಾತ್ರ 11-ಇ)

2.ಅರ್ಜಿದಾರರಿಂದ ಭೂ ಪರಿವರ್ತನೆ ಕೋರಿಕೆಯನ್ನು ಪ್ರಮಾಣಪತ್ರ ನಮೂನೆ-ಎ ನಲ್ಲಿ ಪಡೆಯತಕ್ಕದ್ದು, ಈ ಅಫಿಡವಿಟ್‌ 200 ರು. ಮೌಲ್ಯದಲ್ಲಿರಬೇಕು

3.ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗುವ ಮೂಲಕ ಸಲ್ಲಿಸಿದ ಅರ್ಜಿದಾರರು ಅಪ್‌ಲೋಡ್‌ ಮಾಡಿದ ನೋಟರಿಯವರಿಂದ ಪ್ರಮಾಣೀಕರಿಸಿದ ಅಫಿಡವಿಟ್‌ ಮೂಲ ಪ್ರತಿಯನ್ನು ಅರ್ಜಿ ಸಲ್ಲಿಸಿದ ಏಳು ದಿನದೊಳಗೆ ಜಿಲ್ಲಾಧಿಕಾರಿ/ ತಹಶೀಲ್ದಾರ್‌ ಕಚೇರಿಯ ಅರ್ಜಿ ಸ್ವೀಕೃತಿ ಕೇಂದ್ರದಲ್ಲಿ ಭೂ ಪರಿವರ್ತನೆ ಕೋರಿಕೆಯ ಸಂಖ್ಯೆಯ ಮಾಹಿತಿಯೊಂದಿಗೆ ಸಲ್ಲಿಸಬೇಕು. ಈ ಬಗ್ಗೆ ಸ್ವೀಕೃತಿ ಪಡೆದು, ಸ್ವೀಕೃತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.