ನಗರ ಪ್ರದೇಶದಲ್ಲಿ ಮನೆ ಕಟ್ಟುತ್ತಿದ್ದೀರಾ : ನಿಮಗಿಲ್ಲಿದೆ ಗುಡ್ ನ್ಯೂಸ್..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Jul 2018, 9:25 AM IST
Now Easy To Build House In Urban Areas
Highlights

ನೀವು ನಗರ ಪ್ರದೇಶಗಳಲ್ಲಿ ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ ಹಾಗಾದ್ರೆ ಮನೆ ಕಟ್ಟುವುದು ಇನ್ನಷ್ಟು ಸುಲಭವಾಗಲಿದೆ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಪ್ರಕ್ರಿಯೆ ಅತ್ಯಂತ ಸುಲಭಗೊಳಿಸಲು ಏಕಗವಾಕ್ಷಿ ಪದ್ಧತಿಯನ್ನು ಶೀಘ್ರವೇ ಜಾರಿಗೊಳಿಸುವುದಾಗಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಬೆಂಗಳೂರು :  ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಪ್ರಕ್ರಿಯೆ ಅತ್ಯಂತ ಸುಲಭಗೊಳಿಸಲು ಏಕಗವಾಕ್ಷಿ ಪದ್ಧತಿಯನ್ನು ಶೀಘ್ರವೇ ಜಾರಿಗೊಳಿಸುವುದಾಗಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ನಗರ ಮಟ್ಟದಲ್ಲಿ ಕಟ್ಟಡ, ಲೇಔಟ್ ನಿರ್ಮಾಣಕ್ಕಾಗಿ ಜನರು ಅಲೆದಾಡುವ, ಕಿರುಕುಳ ಎದುರಿಸುವ ಪರಿಸ್ಥಿತಿ ತಪ್ಪಿಸಲು ಏಕಗವಾಕ್ಷಿ ಪದ್ಧತಿ ನೆರವಾಗಲಿದೆ. ಕಟ್ಟಡ ಕಟ್ಟಲು ಜನರು 14 ವಿವಿಧ ಇಲಾಖೆಗಳಿಗೆ ಅಲೆದಾಡಬೇಕಿತ್ತು. ಇದರಿಂದ ವಿಳಂಬದ ಜತೆಗೆ ಸಾಕಷ್ಟು ಸಮಸ್ಯೆಗೂ ಕಾರಣವಾಗಿತ್ತು. ಇದನ್ನು ತಪ್ಪಿಸಲು ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದರು. 

30 - 40  ಅಳತೆಯ ಮನೆ ಕಟ್ಟಲು ಅರ್ಜಿ ಹಾಕಿದರೆ ತಕ್ಷಣ ಪರವಾನಗಿ ಸಿಗಲಿದೆ. ಮುಂದೆ 60 - 40 ಅಳತೆಗೂ ಇದೇ ನಿಯಮ ಅನ್ವಯ  ಮಾಡಲಿದ್ದೇವೆ. ಕಟ್ಟಡ ನಿರ್ಮಾಣ ಕಾಯ್ದೆಗೆ ತಕ್ಕಂತೆ ಎಲ್ಲ ನಿಯಮಗಳನ್ನು ಪಾಲಿಸಿ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಇದೇ ಅರ್ಜಿಯನ್ನು ಅದೇ ಸಮಯಕ್ಕೆ ಉಳಿದ 14 ಇಲಾಖೆಗಳಿಗೂ ಕಳುಹಿಸಲಾಗುತ್ತದೆ. ಏಳು ದಿನಗಳ ಒಳಗೆ ಆಯಾ ಇಲಾಖೆಯವರು ತೀರ್ಮಾನ ಕೈಗೊಳ್ಳಬೇಕು. 

ಇಲ್ಲದಿದ್ದರೆ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಅರ್ಜಿದಾರರು ಕೆಲಸ ಆರಂಭಿಸಬಹುದು. ಅಲ್ಲದೇ ಈ ಎಲ್ಲ ಇಲಾಖೆಯವರು ಒಂದು ದಿನ ನಿಗದಿಪಡಿಸಿಕೊಂಡು ಒಟ್ಟಿಗೆ ಹೋಗಿ ಮನೆ ನಿರ್ಮಾಣಕ್ಕೆ ಗುರುತಿಸಲಾದ ಜಾಗವನ್ನು ಪರಿಶೀಲನೆ ಮಾಡಬೇಕು ಎಂಬ ನಿಯಮ ಜಾರಿಗೊಳಿಸಲಾಗುವುದು. 

ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲು ಸಂಪೂರ್ಣ ಪ್ರಕ್ರಿಯೆಗೆ 30 ದಿನಗಳ ಗಡುವು ಇರಲಿದೆ. ಇದರಿಂದ ಶೇ.80 ರಷ್ಟು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ನಗರಾಭಿವೃದ್ಧಿ ಇಲಾಖೆಗೆ ಈ ಸಂಬಂಧ ಐಡಿಎಸ್‌ಐ ಸಂಸ್ಥೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಿದೆ. ಅದಕ್ಕಾಗಿ 7.46 ಕೋಟಿ ವೆಚ್ಚವಾಗಲಿದೆ. ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೂ ಕೂಡ ಅನ್ವಯವಾಗಲಿದೆ ಎಂದು ತಿಳಿಸಿದರು.

loader