Asianet Suvarna News Asianet Suvarna News

ಕೊಡಗಿನಲ್ಲಿ ಸುಗ್ಗಿಯ ಕಾಲ : ಕಾಫಿ ಕೊಯ್ಲು ಬಲುಜೋರು

ಕೊಡಗು ಜಿಲ್ಲೆಯಲ್ಲೀಗ ಅರೆಬಿಕಾ ಕಾಫಿ ಹಣ್ಣಾಗುತ್ತಿದ್ದು, ಕೆಲವೆಡೆಗಳಲ್ಲಿ ಕೊಯ್ಲಿನ ಕೆಲಸ ಭರದಿಂದ ಸಾಗಿದೆ. ಕೂಲಿ ಕಾರ್ಮಿಕರು ಕಾಫಿ ಹಣ್ಣು ಕೊಯ್ಲು ಮಾಡುವಲ್ಲಿ ನಿರತರಾಗಿದ್ದಾರೆ. ಹಸಿರ ಕಾಫಿ ಗಿಡದಲ್ಲಿ ಕಾಫಿ ಹಣ್ಣು ಕೆಂಬಣ್ಣಕ್ಕೆ ತಿರುಗುತ್ತಿದೆ.

Now Coffee Harvesting  Season in Kodagu

ಮಡಿಕೇರಿ (ನ.22): ಕೊಡಗು ಜಿಲ್ಲೆಯಲ್ಲೀಗ ಸುಗ್ಗಿಯ ಕಾಲ ಆರಂಭವಾಗಿದೆ. ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಹಣ್ಣಾಗುತ್ತಿದ್ದು, ಕೆಲವೆಡೆಗಳಲ್ಲಿ ಕೊಯ್ಲಿನ ಕೆಲಸ ಭರದಿಂದ ಸಾಗಿದೆ. ಕೂಲಿ ಕಾರ್ಮಿಕರು ಕಾಫಿ ಹಣ್ಣು ಕೊಯ್ಲು ಮಾಡುವಲ್ಲಿ ನಿರತರಾಗಿದ್ದಾರೆ. ಹಸಿರ ಕಾಫಿ ಗಿಡದಲ್ಲಿ ಕಾಫಿ ಹಣ್ಣು ಕೆಂಬಣ್ಣಕ್ಕೆ ತಿರುಗುತ್ತಿದೆ.

ಕೊಡಗಿನಲ್ಲಿ ಲಕ್ಷಾನುಗಟ್ಟಲೆ ಎಕರೆ ಕಾಫಿ ತೋಟಗಳಿರುವುದರಿಂದ ಸುಮಾರು ಮೂರು ತಿಂಗಳು ಕಾಫಿ ಕೊಯ್ಲು ನಡೆಯುತ್ತದೆ. ಕಾಫಿ ಕೊಯ್ಲಿಗಾಗಿ ಬೆಳೆಗಾರರು ದೂರದ ಪ್ರದೇಶದಿಂದ ಕಾರ್ಮಿಕರನ್ನು ಕರೆತರುತ್ತಾರೆ. ಒಬ್ಬ ಕಾರ್ಮಿಕ ದಿನವೊಂದಕ್ಕೆ ಸುಮಾರು 200 ಕೆ.ಜಿ.ಯಷ್ಟು ಕಾಫಿ ಕೊಯ್ಲು ಮಾಡುತ್ತಾನೆ. ಒಂದು ದಿನ 20ಕ್ಕೂ ಅಧಿಕ ಗಿಡಗಳಲ್ಲಿ ಕಾಫಿ ಗಿಡಗಳಲ್ಲಿ ಕೊಯ್ಲು ಮಾಡುತ್ತಾರೆ.

ಶಾಲಾ ರಜಾ ಅವಧಿಯಲ್ಲಿ ಮಕ್ಕಳೂ ಕೂಡ ಕೆಲಸಕ್ಕೆ ತೆರಳಿ ಒಂದಿಷ್ಟು ಹಣ ಮಾಡಿಕೊಳ್ಳುತ್ತಾರೆ. ಕೊಡಗಿನಲ್ಲಿ ನೆರಳಿನಾಶ್ರಯಲ್ಲಿ ಕಾಫಿ ಬೆಳೆಯಲಾಗುತ್ತದೆ. ಕಾಫಿ ತೋಟದಿಂದ ಬೆಳೆದ ಕಾಫಿ ಬೀಜಗಳನ್ನು ಕ್ಯೂರಿಂಗ್‌'ಗೆ ಕಳುಹಿಸಲಾಗುತ್ತದೆ. ಅಲ್ಲಿ ಹಸಿರು ಕಾಫಿಯನ್ನು ಮಾರುಕಟ್ಟೆಗೆ ಸಜ್ಜುಗೊಳಿಸಲು ಅಂತಿಮ ಸ್ಪರ್ಶ ನೀಡಲಾಗುತ್ತದೆ. ಕ್ಯೂರಿಂಗ್ ಸಮಯದಲ್ಲಿ ಬೀಜದ ಉಸ್ತುವಾರಿಯನ್ನು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಮಾಡಲಾಗುತ್ತದೆ. ಕ್ಯೂರಿಂಗ್ ವೇಳೆ ವಿವಿಧ ಕ್ರಮಗಳನ್ನು ಅನುಸರಿಸಲಾಗುತ್ತದೆ. ಪೊರೆಯಂತಿರುವ ಹೊದಿಕೆ ಮತ್ತು ತೆಳುವಾದ ರಜತವರ್ಣದ ಕವಚವನ್ನು ತೆಗೆದು, ಬೀಜವನ್ನು ಪ್ರತ್ಯೇಕವಾಗಿ ಮಾಡಲಾಗುತ್ತದೆ. ಹೀಗೆ ಕ್ಯೂರಿಂಗ್ ಸಂದರ್ಭದಲ್ಲಿ ಕಾಫಿಯನ್ನು ಗೋದಾಮಿನಲ್ಲಿಡುವುದು, ಸಂಗ್ರಹಣೆ, ಸ್ವಚ್ಛಗೊಳಿಸುವುದು, ಧೂಳು ತೆಗೆಯುವುದು, ಪಾಲಿಶ್ ಮಾಡುವುದು ಹಾಗೂ ಮತ್ತಿತರ ಕ್ರಮಗಳನ್ನು ಅನುಸರಿಸಲಾಗುತ್ತದೆ.

ಎರಡು ಬಗೆಯ ಕಾಫಿ: ಕೊಡಗು ಜಿಲ್ಲೆಯಲ್ಲಿ ಎರಡು ಬಗೆಯ ಕಾಫಿಯನ್ನು ಬೆಳೆಯಲಾಗುತ್ತದೆ. ಅರೆಬಿಕಾ ಹಾಗೂ ರೊಬಸ್ಟಾ. ಅರೇಬಿಕಾ ಕಾಫಿಯು ಎತ್ತರದ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಮಲೆನಾಡ ಪ್ರದೇಶವಾಗಿರುವುದರಿಂದ ಕೊಡಗಿನಲ್ಲಿ ಅತಿ ಹೆಚ್ಚು ರೋಬೆಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದೆ. ರೋಬಸ್ಟಾ ಕಾಫಿಯನ್ನು ತಗ್ಗು ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಅರೇಬಿಕಾವನ್ನು ಡಿಸೆಂಬರ್ ತಿಂಗಳಲ್ಲಿ ಹಾಗೂ ರೋಬಸ್ಟಾ ಕಾಫಿ ಗಿಡವನ್ನು ಜನವರಿ ಫೆಬ್ರವರಿ ತಿಂಗಳಲ್ಲಿ ಬೆಳೆಯಬಹುದಾಗಿದೆ. ಕೊಡಗು ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಅಸ್ಸಾಂ, ದಾವಣಗೆರೆ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾಫಿ ಕೊಯ್ಲಿನ ಸಂದರ್ಭ ಜಿಲ್ಲೆಯಲ್ಲಿ ಕಾರ್ಮಿಕರು ಲೈನ್‌ಮನೆಗಳಲ್ಲಿ ತಂಗಿ ಕೆಲಸ ಮಾಡುತ್ತಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಕಾಫಿ ಬೆಳೆಯಲಾಗುತ್ತಿದೆ.

ವರದಿ : ವಿಘ್ನೇಶ್ ಎಂ. ಭೂತನಕಾಡು - ಕನ್ನಡ ಪ್ರಭ

Follow Us:
Download App:
  • android
  • ios