ರೆಡ್ಡಿ ಹೇಳಿಕೆಯಿಂದ ಬಿಜೆಪಿಯಲ್ಲೀಗ ಆತಂಕ
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೇಳಿಕೆ ಇದೀಗ ಬಿಜೆಪಿಯಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಇವರ ವೈಯಕ್ತಿಕ ಹೇಳಿಕೆಗಳು ಪಕ್ಷದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದಾದ ಭೀತಿ ಎದುರಾಗಿದೆ.
ಬೆಂಗಳೂರು : ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮತ್ತು ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ವೈಯಕ್ತಿಕ ಹೇಳಿಕೆಗಳು ಪಕ್ಷದಲ್ಲಿ ಸಣ್ಣದಾದ ಆತಂಕ ಸೃಷ್ಟಿಸಿದ್ದು, ಈ ರೀತಿಯ ಹೇಳಿಕೆಗಳು ಪ್ರಸಕ್ತ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಸೃಷ್ಟಿಸಬಹುದೇನೊ ಎಂಬ ಮಾತು ಬಿಜೆಪಿ ಪಾಳೆಯದಲ್ಲಿ ಕೇಳಿಬರುತ್ತಿದೆ.
ಭಾವೋದ್ವೇಗದಿಂದ ನೀಡುವ ಹೇಳಿಕೆಗಳು ಅಲ್ಪ ಪ್ರಮಾಣದ ಮತಗಳನ್ನೂ ಕಸಿದರೂ ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗಬಹುದು ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸೇರಿದಂತೆ ಹಲವು ಮುಖಂಡರ ಅನಗತ್ಯ ಹೇಳಿಕೆಗಳಿಂದಾಗಿ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಣಾಮ ಬೀರಿತ್ತು. ಇಂಥ ಹೇಳಿಕೆಗಳು ತುಂಬಾ ಹೆಚ್ಚು ಅಲ್ಲದಿದ್ದರೂ ನಿರ್ಣಾಯಕ ಅನ್ನುವಷ್ಟುಮತದಾರರ ಮೇಲೆ ಪ್ರಭಾವ ಬೀರಿದರೆ ಅದರಿಂದ ಪಕ್ಷಕ್ಕೆ ನಷ್ಟಉಂಟಾಗುತ್ತದೆ ಎಂಬ ಚರ್ಚೆ ಇದೀಗ ಪಕ್ಷದಲ್ಲಿ ಶುರುವಾಗಿದೆ.
ಇತರ ಪಕ್ಷಗಳ ಮುಖಂಡರ ರಾಜಕೀಯ ಆರೋಪಗಳನ್ನು ರಾಜಕೀಯವಾಗಿಯೇ ಎದುರಿಸಬೇಕೆ ಹೊರತು ಅವರ ಕೌಟುಂಬಿಕ ವಿಚಾರಗಳನ್ನು ಪ್ರಸ್ತಾಪಿಸಿ ಪ್ರತ್ಯಾರೋಪ ಮಾಡುವುದರಿಂದ ವಿನಾಕಾರಣ ಗೊಂದಲ ಉಂಟಾಗುತ್ತದೆ. ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಮಾರ್ ಬಂಗಾರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಡಿರುವ ಮಾತುಗಳು ಸರಿಯಲ್ಲದಿದ್ದರೂ ಅದಕ್ಕೆ ತಿರುಗೇಟು ನೀಡುವ ಭರದಲ್ಲಿ ಭಾವನಾತ್ಮಕ ಅಂಶಗಳನ್ನು ಕೆಣಕುವುದು ಸರಿಯಲ್ಲ.
ಹೀಗಾದಾಗ ಇತರ ಪಕ್ಷಗಳ ಮುಖಂಡರ ಆರೋಪಗಳು ಗೌಣವಾಗಿ ಪ್ರತ್ಯಾರೋಪಗಳೇ ಪ್ರಮುಖವಾಗಿ ವಿಜೃಂಭಿಸುತ್ತವೆ. ಜೊತೆಗೆ ಜನರ ಮನಸ್ಸಿನ ಮೇಲೂ ಅವು ಹೆಚ್ಚು ಪ್ರಭಾವ ಬೀರುತ್ತವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಹಲವು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.