ಲಖನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಟಾಂಗ್‌ ನೀಡಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೊಸ ತಂತ್ರ ಹೂಡಿದ್ದಾರೆ. 

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಉತ್ತರ ಪ್ರದೇಶದಲ್ಲಿ, ಕಾಂಬೋಡಿಯಾದ ಆ್ಯಂಕೋರ್‌ ವ್ಯಾಟ್‌ ಮಾದರಿಯ ಭವ್ಯ ದೇವಸ್ಥಾನವುಳ್ಳ ವಿಷ್ಣು ದೇವರ ಹೆಸರಿನ ವೈಭವಯುತ ನಗರವನ್ನು ಅಭಿವೃದ್ಧಿ ಪಡಿಸುವುದಾಗಿ ಅಖಿಲೇಶ್‌ ಘೋಷಿಸಿದ್ದಾರೆ. 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸುವ ಬಗ್ಗೆ ಉತ್ತರ ಪ್ರದೇಶ ಡಿಸಿಎಂ, ಬಿಜೆಪಿ ನಾಯಕ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ ಬೆನ್ನಲ್ಲೇ ಅಖಿಲೇಶ್‌ ಹೇಳಿಕೆ ಹೊರಬಿದ್ದಿರುವುದು ಪ್ರಾಮುಖ್ಯತೆಯನ್ನು ಪಡೆದಿದೆ. ಇಟಾವಾದ ಸಿಂಹ ಸಫಾರಿ ಬಳಿ 2,000 ಎಕರೆ ಭೂಮಿಯಿದ್ದು, ಅಲ್ಲಿ ಶ್ರೀವಿಷ್ಣುವಿನ ಹೆಸರಿನ ನಗರ ನಿರ್ಮಿಸುವುದಾಗಿ ಅವರು ಘೋಷಿಸಿದ್ದಾರೆ.