ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದ ಸುಮಾರು 850 ವರ್ಷದ ಐತಿಹಾಸಿಕ ಚರ್ಚ್ ಸುಟ್ಟು ಕರಕಲು
ಪ್ಯಾರಿಸ್[ಏ.16]: ಪ್ರವಾಸಿಗರ ನೆಚ್ಚಿನ ತಾಣವೆಂದೇ ಹೆಸರಾದ ಪ್ಯಾರೀಸ್‌ನಲ್ಲಿ ಸೋಮವಾರ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ವಾರ್ಷಿಕ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದ ಸುಮಾರು 850 ವರ್ಷದ ಐತಿಹಾಸಿಕ ನೋಟ್ರೆ-ಡ್ಯಾಂ ಗೋಥಿಕ್ ಕ್ಯಾಥೆ ಡ್ರಲ್ ಚರ್ಚ್ ಸುಟ್ಟು ಕರುಕಲಾಗಿದೆ.
ಚರ್ಚ್‌ನ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ಮರದ ತುಂಡುಗಳಿಗೆ ಬೆಂಕಿ ಆವರಿಸಿಕೊಂಡು ಈ ಅವಘಡ ಸಂಭವಿಸಿದೆ ಎಂದು ಚರ್ಚ್‌ನ ವಕ್ತಾರರು ತಿಳಿಸಿದರು. ಈ ಅನಾಹುತ ಕಂಡು ಪ್ಯಾರೀಸ್ಸಿಗರು ಮತ್ತು ಪ್ರವಾಸಿಗರು ಒಂದು ಕ್ಷಣ ನಿಬ್ಬೆರಗಾದರು. ಏತನ್ಮಧ್ಯೆ, ಚರ್ಚ್‌ನ ನವೀಕರಣವೂ ಬೆಂಕಿ ದುರಂತಕ್ಕೆ ಕಾರಣವಿರಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. ಇದೇ ಕಾರಣಕ್ಕಾಗಿ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್ ಅವರು ರದ್ದುಗೊಳಿಸಿದರು.
ಇನ್ನು ಪ್ಯಾರೀಸ್ ಮೇಯರ್ ಅನ್ನೆ ಹಿಡಲ್ಗೊ ಅವರು ಇದೊಂದು ‘ಭಯಂಕರ ಬೆಂಕಿ’ ಘಟನೆ ಎಂದು ವಿವರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಪ್ಯಾರೀಸ್‌ನ ನೋಟರ್ ಡ್ಯಾಂ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಹೊತ್ತಿ ಕೊಂಡಿರುವ ಬೆಂಕಿ ಕೆನ್ನಾಲಿಗೆ ನಿಜಕ್ಕೂ ಘೋರ,’ ಎಂದಿದ್ದಾರೆ.
