ಕಳೆದ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ಬೇರೆ ಪಕ್ಷಕ್ಕೆ ಮತ ಚಲಾಯಿಸಿದ್ದ ಜೆಡಿಎಸ್‌ನ ಏಳು ಮಂದಿ ಬಂಡಾಯ ಶಾಸಕರಿಗೆ ಪಕ್ಷಾಂತರ ಕಾಯ್ದೆ ನಿಯಮದ ಅನ್ವಯ ವಿಧಾನಸಭೆ ಅಧ್ಯಕ್ಷರು ನೋಟಿಸ್‌ ಜಾರಿ ಮಾಡಿದ್ದಾರೆ.

ಬೆಂಗಳೂರು : ಕಳೆದ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ಬೇರೆ ಪಕ್ಷಕ್ಕೆ ಮತ ಚಲಾಯಿಸಿದ್ದ ಜೆಡಿಎಸ್‌ನ ಏಳು ಮಂದಿ ಬಂಡಾಯ ಶಾಸಕರಿಗೆ ಪಕ್ಷಾಂತರ ಕಾಯ್ದೆ ನಿಯಮದ ಅನ್ವಯ ವಿಧಾನಸಭೆ ಅಧ್ಯಕ್ಷರು ನೋಟಿಸ್‌ ಜಾರಿ ಮಾಡಿದ್ದಾರೆ.

2016ರಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ವಿಪ್‌ ಉಲ್ಲಂಘಿಸಿ ಅನ್ಯ ಪಕ್ಷದ ಅಭ್ಯರ್ಥಿಗಳಿಗೆ ಏಳು ಮಂದಿ ಶಾಸಕರು ಮತ ಹಾಕಿದ್ದರು. ಈ ಬಗ್ಗೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸ್ಪೀಕರ್‌ಗೆ ಶ್ರವಣಬೆಳಗೊಳ ಶಾಸಕ ಸಿ.ಎನ್‌. ಬಾಲಕೃಷ್ಣ, ಮೂಡಿಗೆರೆ ಕ್ಷೇತ್ರದ ಬಿ.ಬಿ. ನಿಂಗಯ್ಯ ಅವರು ಜೆಡಿಎಸ್‌ ಪರ ದೂರು ನೀಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕೋರಿದ್ದರು.

ಈ ಹಿನ್ನೆಲೆಯಲ್ಲಿ ಈಗಾಗಲೇ ವಿಚಾರಣೆ ನಡೆಸಿರುವ ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರ ಕಚೇರಿಗೆ ಮಾ. 19ರಂದು ಬೆಳಗ್ಗೆ 11.30 ಗಂಟೆಗೆ ತಮ್ಮ ಕೊಠಡಿಗೆ ಮುಂದುವರೆದ ವಿಚಾರಣೆಗೆ ಆಗಮಿಸುವಂತೆ ಸಚಿವಾಲಯದ ಕಾರ್ಯದರ್ಶಿ ಎಸ್‌. ಮೂರ್ತಿ ನೋಟಿಸ್‌ ನೀಡಿದ್ದಾರೆ.

ಹೀಗಾಗಿ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌, ನಾಗಮಂಗಲ ಕ್ಷೇತ್ರದ ಎನ್‌. ಚಲುವರಾಯಸ್ವಾಮಿ, ಶ್ರೀರಂಗಪಟ್ಟಣದ ಎ.ಬಿ. ರಮೇಶ ಬಂಡಿಸಿದ್ದೇಗೌಡ, ಮಾಗಡಿ ಕ್ಷೇತ್ರದ ಎಚ್‌.ಸಿ. ಬಾಲಕೃಷ್ಣ, ಪುಲಿಕೇಶಿನಗರದ ಆರ್‌. ಅಖಂಡ ಶ್ರೀನಿವಾಸಮೂರ್ತಿ, ಗಂಗಾವತಿ ಕ್ಷೇತ್ರದ ಇಕ್ಬಾಲ್‌ ಅನ್ಸಾರಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಎಸ್‌. ಭೀಮಾನಾಯಕ್‌ ಅವರಿಗೆ ಕಂಟಕ ಎದುರಾಗಿದೆ.

ಮಾ. 23ರಂದು ರಾಜ್ಯಸಭಾ ಚುನಾವಣೆ ನಿಗದಿಯಾಗಿದ್ದು, ಈ ವೇಳೆ ಬಂಡಾಯ ಶಾಸಕರು ಕಾಂಗ್ರೆಸ್‌ ಪರ ಮತ ಚಲಾಯಿಸುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಸ್ಪೀಕರ್‌ ಪಕ್ಷಾಂತರ ಕಾಯಿದೆಯಿಡಿ ನೋಟಿಸ್‌ ಜಾರಿಗೊಳಿಸಿರುವುದು ಬಂಡಾಯ ಶಾಸಕರ ಆತಂಕಕ್ಕೆ ಕಾರಣವಾಗಿದೆ.