Asianet Suvarna News Asianet Suvarna News

ನೋಟು ರದ್ದತಿ ಅತ್ಯಂತ ಕೆಟ್ಟನಿರ್ಧಾರ; ಅದರ ಜಾರಿಯ ವಿಧಾನವೂ ಸರಿ ಇಲ್ಲ: ಚಿದಂಬರಂ

ನೋಟು ರದ್ದತಿಯು ದೇಶದ ರಾಜಕೀಯ ಹಾಗೂ ಆರ್ಥಿಕ ಭವಿಷ್ಯದ ಕುರಿತು ಬಿರುಸಾದ ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರತಿಪಕ್ಷ ಕಾಂಗ್ರೆಸ್‌, ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿದೆ. ಕೇಂದ್ರ ಅರ್ಥ ಸಚಿವರಾಗಿ ಒಂಬತ್ತು ಬಾರಿ ಬಜೆಟ್‌ ಮಂಡಿಸಿರುವ ಆರ್ಥಿಕ ತಜ್ಞ ಪಿ ಚಿದಂಬರಂ ಕೂಡ ಪಕ್ಷದ ಅಭಿಪ್ರಾಯಕ್ಕೆ ದನಿಗೂಡಿಸಿದ್ದಾರೆ. ನೋಟು ರದ್ದತಿಯಿಂದ ಆಗುವ ಹಣಕಾಸು ತೊಡಕುಗಳು, ಕಾಳಧನವನ್ನು ಹೊರತೆಗೆಯಲು ಈ ಹಿಂದೆ ಕಾಂಗ್ರೆಸ್‌ ಸರ್ಕಾರ ತೆಗೆದುಕೊಂಡ ಕ್ರಮಗಳು ಮುಂತಾದ ವಿಷಯಗಳ ಬಗ್ಗೆ ಇಲ್ಲಿ ಅವರು ಮಾತನಾಡಿದ್ದಾರೆ. ಚಿದಂಬರಂ ಅವರು ‘ಇಂಡಿಯಾ ಟುಡೆ' ವಾಹಿನಿಗಾಗಿ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

note ban decision by central govt is the most wrong step says p chidambaram

ನೋಟು ರದ್ದತಿ ಘೋಷಿಸಿದ ಮರುದಿನ, ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದರು. ಆದರೆ ಒಂದೇ ವಾರದಲ್ಲಿ ಸರ್ಕಾರದ ಈ ಕ್ರಮ ಒಂದು ದೊಡ್ಡ ಹಗರಣವೆಂದು ರಾಹುಲ್‌ ಗಾಂಧಿ ಕರೆಯುತ್ತಿದ್ದಾರೆ. ಒಂದು ವಾರದಲ್ಲಿ ಇಷ್ಟೊಂದು ದೊಡ್ಡ ಯುಟರ್ನ್‌ ಏಕೆ?
ಪ್ರಧಾನಿ ಮೋದಿ ನೋಟು ರದ್ದತಿ ಕ್ರಮ ಘೋಷಿಸಿದ ದಿನ ನಮಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ನಾವು ಯಾವುದೇ ರೀತಿಯ ಅವಕಾಶವಾದಿತನ ಹಾಗೂ ದುಸ್ಸಾಹಸ ಕ್ರಮಗಳನ್ನು ವಿರೋಧಿಸುತ್ತೇವೆಂದು ಇನ್ನೊಮ್ಮೆ ಪುನರುಚ್ಚರಿಸುತ್ತೇನೆ. ನಕಲಿ ನೋಟು ಹಾವಳಿ, ಭ್ರಷ್ಟಚಾರ ತಡೆ ಹಾಗೂ ಕಾಳಧನ ಹೊರತರುವಿಕೆ-ಈ ಮೂರು ಉದ್ದೇಶಗಳನ್ನು ಸರ್ಕಾರ ಹೊಂದಿದ್ದರೆ ನಾವು ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಆದರೆ ದಿನಗಳೆದಂತೆ ಸರ್ಕಾರದ ನಿರ್ಧಾರವು ಗಂಭೀರ ಸವಾಲುಗಳನ್ನು ಸೃಷ್ಟಿಸಿದೆ. ಮೇಲಾಗಿ, ಸರ್ಕಾರ ತನ್ನ ನಿರ್ಧಾರವನ್ನು ಜಾರಿಗೊಳಿಸಲು ಕೈಗೊಂಡ ವಿಧಾನ ಕಳವಳಕಾರಿಯಾಗಿದೆ. ಅದನ್ನು ನಾವು ಖಂಡಿತವಾಗಿ ಪ್ರಶ್ನಿಸುವೆವು.

ವಿತ್ತ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವೇ?
ನಾನದನ್ನು ನಂಬುವುದಿಲ್ಲ. ಅಂಥ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸಾಮಾನ್ಯವಾಗಿ ಹಣಕಾಸು ಸಚಿವ­ರೊಂದಿಗೆ ಸಮಾಲೋಚಿಸಲೇಬೇಕು. ಹಣಕಾಸು ಸಚಿವರು ಒಂದು ಪ್ರಕ್ರಿಯೆಯಲ್ಲಿ ಇರುತ್ತಾರೆಂದಾದರೆ, ದೇಶದ ಪ್ರಧಾನ ಆರ್ಥಿಕ ಸಲಹೆಗಾರರೂ ಅದರ ಭಾಗವಾಗಿರುತ್ತಾರೆ. ಜೊತೆಗೆ ಬ್ಯಾಂಕಿಂಗ್‌, ತೆರಿಗೆ ಹಾಗೂ ಆರ್ಥಿಕ ವ್ಯವಹಾರ ನೋಡಿಕೊಳ್ಳುವ ಹಿರಿಯ ಅಧಿಕಾರಿಗಳು ಕೂಡ ಇರುತ್ತಾರೆ. ಆದರೆ ಪ್ರಧಾನ ಆರ್ಥಿಕ ಸಲಹೆಗಾರರ ಪಾಲ್ಗೊಳ್ಳುವಿಕೆ ಈ ಪ್ರಕ್ರಿಯೆಯಲ್ಲಿ ಇರಲಿಲ್ಲವೆಂದೇ ನನ್ನ ಅಭಿಪ್ರಾಯ. ಇದು ಊಹೆಯೇ ಇರಬಹುದು. ಈ ಕ್ಷಣದಲ್ಲಿ ಊಹೆಯನ್ನಷ್ಟೇ ಮಾಡಬಲ್ಲೆವು. ಏಕೆಂದರೆ, ನಮಗೆ ಕಡತಗಳ ಮೂಲಕ ಯಾವುದೇ ಮಾಹಿತಿ­ಯಿಲ್ಲ. ಆದರೆ ಸಚಿವಾಲಯದ ಎಲ್ಲ ಅಧಿಕಾರಿ­ಗಳನ್ನು ವಿಶ್ವಾ­ಸಕ್ಕೆ ತೆಗೆದು­ಕೊಳ್ಳ­ಲಾಗಿ­ತ್ತೆಂದು ಅದರರ್ಥವಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು, ವಿಶೇಷ­ವಾಗಿ ಪ್ರಧಾನ ಆರ್ಥಿಕ ಸಲಹೆಗಾರರು ಈ ಪ್ರಕ್ರಿಯೆಯ ಭಾಗವಾಗಿರದೆ ಇಂಥ ನಿರ್ಧಾರ ತೆಗೆದುಕೊಳ್ಳುವುದನ್ನು ಊಹಿಸಬಹುದೇ?

ಒಂದು ವಾರದ ಅವಧಿಯಲ್ಲಿ ಮೂರು ಲಕ್ಷ ಕೋಟಿ ರು. ಬ್ಯಾಂಕಿಂಗ್‌ ವ್ಯವಸ್ಥೆಯೊಳಗೆ ಬಂದಿದೆ ಎನ್ನಲಾಗುತ್ತಿದೆ. ಡಿ.31ರೊಳಗೆ ಆ ಮೊತ್ತವು 8-9 ಲಕ್ಷ ಕೋಟಿ ರು. ದಾಟಬಹುದು ಎಂಬ ಅಂದಾಜಿದೆ. ದೇಶದ ಆರ್ಥಿಕತೆಯನ್ನು ಮುನ್ನಡೆಸಲು ಅಷ್ಟೊಂದು ದೊಡ್ಡ ಮೊತ್ತ ಸಹಕಾರಿ ಅಲ್ಲವೇ?
ಈ ವಿಷಯದಲ್ಲಿ ನಿಮ್ಮ ಮೂಲಭೂತ ತಿಳಿವಳಿಕೆ ಸಂಪೂರ್ಣ ತಪ್ಪಾಗಿದೆ. ಮಾರುಕಟ್ಟೆಯಲ್ಲಿ 15 ಲಕ್ಷ ರು.ಗಳನ್ನು ಬಿಟ್ಟಬಳಿಕ, ಅದನ್ನು ಅಂಗಡಿ, ಪೆಟ್ರೋಲ್ ಬಂಕ್‌, ಶಾಪಿಂಗ್‌ ಮಾಲ್'ನಲ್ಲೆಲ್ಲೂ ವಿನಿಮಯ ಮಾಡುವ ಹಾಗಿಲ್ಲ. ಪ್ರತಿಯೊಬ್ಬರೂ ಬ್ಯಾಂಕಿನ ಮೂಲಕವೇ ವ್ಯವಹರಿಸಬೇಕಾಗುತ್ತದೆ. ಉದಾಹರಣೆಗೆ, ನಾನು ಔಷಧಾಲಯಕ್ಕೆ ಹೋಗಿ 500 ಮುಖಬೆಲೆಯ ನೋಟು ನೀಡಿ, 200 ರು. ಮೌಲ್ಯದ ಔಷಧ ಖರೀದಿಸಿ, ಚಿಲ್ಲರೆ ಪಡೆಯುತ್ತೇನೆ. ಅಲ್ಲಿ ಯಾವುದೇ ಮಧ್ಯಸ್ಥಿಕೆ ಇರುವುದಿಲ್ಲ. ಅಲ್ಲಿ ನೇರವಾಗಿ ನೋಟುಗಳ ವಿನಿಮಯವಾಗುತ್ತದೆ. ಆದರೆ ಸರ್ಕಾರ ಅದನ್ನು ಪಡೆಯುವ ಹಾಗಿಲ್ಲವೆಂದು ಹೇಳಿಬಿಟ್ಟರೆ, ನಾನು ಮೊದಲು ಬ್ಯಾಂಕಿಗೇ ಹೋಗಿ, ಅಲ್ಲಿ 500 ರು. ಕೊಟ್ಟು 100ರ ಐದು ನೋಟು ಪಡೆದು ಬಳಿಕ ಔಷಧಾಲಯಕ್ಕೆ ಹೋಗಬೇಕಾಗುತ್ತದೆ. ಬ್ಯಾಂಕಿನ ಮಧ್ಯಸ್ಥಿಕೆ ಹೊರತು ನಿಮ್ಮಲ್ಲಿರುವ ಹಣ ನಿಷ್ಪ್ರಯೋಜಕವೆಂದು ನೀವೊಮ್ಮೆ ಹೇಳಿದರೆ, ಆ ಹಣ ಬ್ಯಾಂಕಿಗೆ ಬಂದೇ ಬರುವುದು.

ನೋಟು ರದ್ದತಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ನಿಮ್ಮ ಅಭಿಪ್ರಾಯವೇ?
ಈ ಬಗ್ಗೆ ಇನ್ನಷ್ಟು ಅರ್ಥಶಾಸ್ತ್ರೀಯ ವಿಷಯ ತಿಳಿದುಕೊಳ್ಳಬೇಕು. ಬ್ಯಾಂಕಿಂಗ್‌ ವ್ಯವಸ್ಥೆಗೆ ಎಷ್ಟು ಹಣ ವಾಪಸು ಬರಲಿದೆ ಎಂದು ನಾ ಹೇಳಲಾರೆ. ಬಹುಪಾಲು ವಾಪಸು ಬರಬಹುದೆಂದು ರಘುರಾಮ್ ರಾಜನ್‌ ಒಮ್ಮೆ ಹೇಳಿದ್ದರು. ಬ್ಯಾಂಕಿಂಗ್‌ ವ್ಯವಸ್ಥೆಗೆ ಹಣವನ್ನು ವಾಪಸು ತರಲು ಹಲವು ಮಾರ್ಗೋಪಾಯಗಳಿವೆ. ವ್ಯವಸ್ಥೆಗೆ ವಾಪಸು ಬಾರದ ಹಣವನ್ನು ರಿಸರ್ವ್ ಬ್ಯಾಂಕ್‌ ನಾಶಗೊಳಿಸಲಿದೆ. ದೇಶದ ಬೇಡಿಕೆಯನ್ನು ಪೂರೈಸಲು ರಿಸರ್ವ್ ಬ್ಯಾಂಕ್‌ ಹಣ ಉತ್ಪಾದಿಸುತ್ತದೆ. ಒಂದು ವೇಳೆ ಆರ್ಥಿಕತೆ ನಿಭಾಯಿಸಲು ಚಾಲ್ತಿಯಲ್ಲಿರುವ ಹಣ ಸಾಲದಾದಾಗ, ರಿಸರ್ವ್ ಬ್ಯಾಂಕ್‌ ಕರೆನ್ಸಿಯನ್ನು ಮುದ್ರಿಸುತ್ತದೆ. ಮುಂದಿನ 6-8 ತಿಂಗಳಲ್ಲಿ 500, 2000, ಬಹುಶಃ 1000 ರು. ಕರೆನ್ಸಿ ಮುದ್ರಿಸಿದರೂ 15 ಲಕ್ಷ ಕೋಟಿ ರು. ಆಗುವುದಾದರೆ, ಅದೊಂದು ವ್ಯರ್ಥ ಕಸರತ್ತೇ ಆಗಲಿದೆ.

ಆದರೆ ಪ್ರಧಾನಿ ಪ್ರಕಾರ, ದೀರ್ಘಾವಧಿ ಲಾಭಕ್ಕೆ ತಾತ್ಕಾಲಿಕ ಅನನುಕೂಲತೆ ಸಹಿಸಬೇಕಾಗುತ್ತದೆಯಲ್ಲ!
ನೀವೀಗ ಕಾಣುತ್ತಿರುವುದು ಮೊದಲ ಹಂತದ ವ್ಯತಿರಿಕ್ತ ಪರಿಣಾಮಗಳಷ್ಟೆ. ಎರಡನೇ ಹಂತದ ಪರಿಣಾಮಗಳನ್ನು ಮುಂದೆ ಕಾಣಬೇಕಾಗುತ್ತದೆ. ತಿರುಪುರ ಮುಚ್ಚಲ್ಪಟ್ಟಿದೆ, ಸೂರತ್‌ ಮುಚ್ಚಲ್ಪಟ್ಟಿದೆ, ಮಜೂರಿ ನೀಡಲು ವರ್ತಕರ ಬಳಿ ಹಣವಿಲ್ಲ. ಬೀಜ, ರಸಗೊಬ್ಬರ ಖರೀದಿಸಲು ರೈತರ ಬಳಿ ಹಣವಿಲ್ಲ. ಯಾರೋ ಒಬ್ಬರು ನಗದುರಹಿತ ಭಾರತದ ಆಲೋಚನೆಯನ್ನು ಪ್ರಧಾನಿ ತಲೆಯಲ್ಲಿ ಬಿತ್ತಿರಬಹುದು. ಅದನ್ನು ಸಮಾಲೋಚಿಸಿ ಕ್ರಮ ಕೈಗೊಳ್ಳು­ವಲ್ಲಿ ಯಾವುದೇ ತಪ್ಪಿಲ್ಲ. ಅತಿ ಸಣ್ಣ ಜನಸಂಖ್ಯೆಯಿರುವ ಯಾವುದೋ ಒಂದು ದ್ವೀಪದೇಶ ಹೊರತುಪಡಿಸಿ ಜಗತ್ತಿ­ನಲ್ಲಿ ಯಾವುದೇ ದೇಶ ನಗದು ರಹಿತವಾಗಿಲ್ಲ ಎಂದು ಅವರಿಗೆ ಯಾರಾದರೂ ತಿಳಿಹೇಳಬೇಕಿತ್ತು. ನಗದುರಹಿತ ಆರ್ಥಿಕತೆಗೆ ರೂಪಾಂತರ­ಗೊಳ್ಳಲು ಸಾಕಷ್ಟುಸಮಯ ಬೇಕಾಗುತ್ತದೆ. ರಾತ್ರೋರಾತ್ರಿ ಎಲ್ಲರೂ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಸಿ ಎನ್ನುವಂತಿಲ್ಲ. ಹಳ್ಲಿಗಳಲ್ಲಿ ಇಂದಿಗೂ ವಾರದ ಸಂತೆ ವ್ಯಾಪಾರವಿದೆ. ಅಲ್ಲಿ ಕಾರ್ಡ್‌ ಉಪ­ಯೋ­ಗಕ್ಕೆ ಬರುವುದಿಲ್ಲ. ಬಡಗಿ, ಪ್ಲಂಬರ್‌, ಧೋಬಿ, ಎಲೆಕ್ಟ್ರೀಶಿಯನ್‌ ಮುಂತಾದವರಿಗೆ ಹೇಗೆ ಹಣ ಪಾವತಿಸುತ್ತೀರಿ?

ನೀವು ಕೂಡ ನೋಟು ರದ್ದತಿ ಬಗ್ಗೆ ಚಿಂತನೆ ನಡೆಸಿದ್ದಿರಿ ಎಂಬ ಮಾತಿದೆ?
ಹೌದು, ಆ ಪ್ರಸ್ತಾಪ ಬಂದಿತ್ತು, ಆದರೆ ನಾವದನ್ನು ತಿರಸ್ಕರಿಸಿದ್ದೆವು. ನಾನು ಮತ್ತು ರಘುರಾಂ ರಾಜನ್‌ ಅದರ ಬದಲಾಗಿ, ಸಮಯವಕಾಶ ನೀಡಿ ಹಳೇ ಕ್ರಮಸಂಖ್ಯೆಯ ನೋಟುಗಳನ್ನು ಹೊಸ ನೋಟು­ಗಳಾಗಿ ಬದಲಾಯಿ­ಸಿದೆವು. ಆದರೆ ಅದನ್ನು ಬಡವರ ವಿರೋಧಿ ಕ್ರಮವೆಂದು ಬಣ್ಣಿಸಿ, ಬಿಜೆಪಿಯ ಮೀನಾಕ್ಷಿ ಲೇಖಿಯವರು ತೀವ್ರವಾಗಿ ವಿರೋಧಿಸಿದ್ದರು. ಅದು ಬಡವರ ವಿರೋಧಿ ಕ್ರಮವಾಗಿದ್ದರೆ ಈಗ ನಡೆಯುತ್ತಿರುವುದೇನು?

ರಘುರಾಂ ರಾಜನ್‌ ಈಗ ಗವರ್ನರ್‌ ಆಗಿರುತ್ತಿದ್ದರೆ ಈ ಕ್ರಮವನ್ನು ವಿರೋಧಿಸುತ್ತಿದ್ದರೇ?
ಹೌದು, ಸಂಶಯವೇ ಇಲ್ಲ. ಕಳೆದ ವರ್ಷ ‘‘ನೋಟು ರದ್ದತಿಯಿಂದ ಲಾಭಕ್ಕಿಂತ ಸಮಸ್ಯೆ ಹಾಗೂ ನಷ್ಟವೇ ಹೆಚ್ಚು, ಅದು ವಿವೇಕಪೂರ್ಣ ನಿರ್ಧಾರವಲ್ಲ ಎಂದು ಅವರು ಹೇಳಿದ್ದರು.

ಹಾಗಾದರೆ, ಕಪ್ಪುಹಣ, ನಕಲಿ ನೋಟು ಹಾವಳಿ, ಭಯೋತ್ಪಾದನೆಗೆ ಕಪ್ಪುಹಣದ ಬಳಕೆ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸಲು ನೀವು ಏನು ಕ್ರಮ ಕೈಗೊಳ್ಳುತ್ತಿದ್ದಿರಿ?
ಎನ್‌ಐಎ ಮಾಹಿತಿ ಪ್ರಕಾರ, ಚಾಲ್ತಿಯಲ್ಲಿರುವ 16.5 ಲಕ್ಷ ಕೋಟಿಯ ಪೈಕಿ ನಕಲಿ ನೋಟುಗಳ ಪ್ರಮಾಣ 400 ಕೋಟಿ ರು.ನಷ್ಟುಮಾತ್ರ. ಕಾಲಾನುಸಾರ ತಂತ್ರಜ್ಞಾನ ಬಳಸಿ ನಕಲಿ ನೋಟುಗಳನ್ನು ಮುದ್ರಿಸುವುದು ಬಹಳ ಕಷ್ಟವಲ್ಲ. ಅದಕ್ಕಾಗಿಯೇ, ಪ್ರತಿ ನಾಲ್ಕೈದು ವರ್ಷಗಳಲ್ಲಿ ಹಳೇ ಕ್ರಮಸಂಖ್ಯೆಯ ನೋಟು ಬದಲಾಯಿಸುವ ಕ್ರಮ ನಡೆದುಬಂದಿದೆ. ಅದಾಗ್ಯೂ ನಕಲಿ ನೋಟುಗಳನ್ನು ಮುದ್ರಿಸುವವರು ಮುದ್ರಿಸುತ್ತಾರೆ. ಜಗತ್ತಿನಲ್ಲಿ ಅತೀ ಹೆಚ್ಚು ನಕಲಿ ನೋಟುಗಳಿರುವ ಕರೆನ್ಸಿ ಎಂದರೆ ಅಮೆರಿಕನ್‌ ಡಾಲರ್‌. ಅದಕ್ಕಾಗಿಯೇ ಜಗತ್ತಿನ ಎಲ್ಲ ದೇಶಗಳು, ಹಳೇ ಕರೆನ್ಸಿ ನೋಟುಗಳನ್ನು ನಿಗದಿತ ಅವಧಿಯಲ್ಲಿ ಬದಲಾಯಿಸುತ್ತವೆ. ಆದರೆ ಅದರಿಂದ ನಕಲಿ ನೋಟು ಹಾವಳಿ ಸಂಪೂರ್ಣ ಕೊನೆಗೊಳ್ಳುತ್ತದೆ ಎಂದು ಹೇಳಲಾರೆ. ಆದರೆ ಗಣನೀಯ ಪ್ರಮಾಣದಲ್ಲಿ ಕಡಿಮೆ­ಯಾಗುತ್ತದೆ. ಇನ್ನು, ಕಪ್ಪುಹಣ ನಿಯಂತ್ರಣಕ್ಕೆ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆಗಳಾಬೇಕು. 1997ರಲ್ಲಿ ನಾವು ನೇರ ತೆರಿಗೆ ದರಗಳನ್ನು ಇಳಿಸಿದೆವು. ಆ ಬಳಿಕ ಯಾವುದೇ ಹಣಕಾಸು ಸಚಿವರೂ ಅಂಥ ಕ್ರಮ ತೆಗೆದುಕೊಂಡಿಲ್ಲ.

ಹಾಗಾದರೆ ಪ್ರಧಾನಿ ಮೋದಿಗೆ ನಿಮ್ಮ ಸಲಹೆಗಳೇನು?
ಜನರಿಗೆ ಯಾವುದೇ ಸಮಸ್ಯೆ ಆಗದಂತೆ, ಕೈಗೊಂಡ ನಿರ್ಧಾರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದೇ ಮುಖ್ಯ ಸವಾಲು. ಪ್ರಧಾನಿ, ಹಣಕಾಸು ಸಚಿವರು ನ.9ರಂದು ಸರ್ವಪಕ್ಷ ಸಭೆ ಕರೆದು ಈ ವಿಚಾರವನ್ನು ಸಮಾಲೋಚಿಸಬೇಕಿತ್ತು. ನಾವೆಲ್ಲರೂ ಗೌಪ್ಯತೆಯನ್ನು ಕಾಪಾಡಿಕೊಂಡು ಸಲಹೆಗಳನ್ನು ನೀಡುತ್ತಿದ್ದೆವು. ಅದಿರಲಿ, ಘೋಷಣೆ ಮಾಡಿದ ಬಳಿಕವಾದರೂ ಸಮಾಲೋಚನೆ ನಡೆಸಬಹುದಿತ್ತು. ಕನಿಷ್ಠಪಕ್ಷ, ಆರ್ಥಿಕ ತಜ್ಞರೊಂದಿಗೆ ಚರ್ಚೆ ನಡೆಸಬಹುದಿತ್ತು. ಆದರೆ ಪ್ರತಿಪಕ್ಷಗಳಿಗೆ ಬೈಗುಳಗಳ ಹೊರತಾಗಿ ಬೇರೇನೂ ಸಿಗುತ್ತಿಲ್ಲ!

ಈಗ ಉಂಟಾಗಿರುವ ಸಮಸ್ಯೆಗಳನ್ನು ಬೇರಾವ ರೀತಿಯಲ್ಲಿ ನಿಭಾಯಿಸಬಹುದು?
ಪ್ರಧಾನಿ ದೊಡ್ಡ ಪ್ರಮಾದವನ್ನು ಎಸಗಿದ್ದಾರೆ, ಸಮಯದೊಂದಿಗೆ ಸ್ಪರ್ಧೆಗಿಳಿದಿದ್ದಾರೆ. ಈಗ ನಿಷೇಧಿಸಿರುವ 2,100 ಕೋಟಿ ರು. ಮೌಲ್ಯದ ನೋಟುಗಳ ಬದಲಾಗಿ ಹೊಸ ನೋಟುಗಳನ್ನು ಮುದ್ರಿಸಲು ಈಗಿನ ಸಾಮರ್ಥ್ಯದ ಪ್ರಕಾರ ಕನಿಷ್ಠ ಏಳು ತಿಂಗಳು ಬೇಕು. ಆ ಸಮಯವನ್ನು ಕಡಿಮೆಗೊಳಿಸಲು ಅವರು 2,000 ರು. ನೋಟು ಮುದ್ರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅದಕ್ಕೂ ಮೂರ್ನಾಲ್ಕು ತಿಂಗಳು ಬೇಕೇ ಬೇಕು. ಇದರ ಆರ್ಥಿಕ ಸಮರ್ಥನೆಯನ್ನು ಅವರು ಕೊಟ್ಟಿಲ್ಲ. ಯಾವುದೇ ಪೂರ್ವತಯಾರಿ ಇಲ್ಲದೆ ಇದನ್ನು ಘೋಷಿಸಲಾಗಿದೆ.

ಸರ್ಕಾರ ಈ ಕ್ರಮವನ್ನು ವಾಪಸು ಪಡೆಯಬೇಕೆಂದು ನಿಮ್ಮ ಬೇಡಿಕೆಯೇ?
ಸಾಧ್ಯವೇ ಇಲ್ಲ. ಒಮ್ಮೆ ಮೊಟ್ಟೆಯನ್ನು ಒಡೆದ ಬಳಿಕ ಅದನ್ನು ಪೂರ್ವಸ್ಥಿತಿಗೆ ತರಲು ಸಾಧ್ಯವಿಲ್ಲ. ಸರ್ಕಾರ ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿ ಸಲಹೆಗಳನ್ನು ಪಡೆದುಕೊಳ್ಳಬೇಕು. ಕೆಟ್ಟನಿರ್ಧಾರವೊಂದನ್ನು ಅತೀ ಕೆಟ್ಟರೀತಿಯಲ್ಲಿ ಸರ್ಕಾರ ಜಾರಿಗೊಳಿಸುತ್ತಿದೆ ಎನ್ನದೇ ಬೇರೆ ವಿಧಿಯಿಲ್ಲ. ಸರ್ಕಾರದ ಉದ್ದೇಶಗಳು ಒಳ್ಳೆಯದಿರಬಹುದು. ಅದನ್ನು ಸಾಧಿಸಲು ಇನ್ನೂ ಒಳ್ಳೆಯ ಮಾರ್ಗೋಪಾಯಗಳಿದ್ದವು. 

(ಬರಹ ರೂಪ: ಸೈಯದ್‌ ಇಶ್ತಿಯಾಕ್‌)

Follow Us:
Download App:
  • android
  • ios