Asianet Suvarna News Asianet Suvarna News

10 ವರ್ಷವಾದರೂ ಬಗೆಹರಿದಿಲ್ಲ ವಿಷ್ಣು ಸ್ಮಾರಕ ಗೊಂದಲ

ವಿಷ್ಣುವರ್ಧನ್ ಅವರು ನಿಧನ ಹೊಂದಿ ಬರುವ ಡಿ. 30 ಕ್ಕೆ ಹತ್ತು ವರ್ಷಗಳಾಗುತ್ತದೆ. ಅಷ್ಟರೊಳಗಾಗಿ ವಿಷ್ಣು ಅವರ ಸ್ಮಾರಕ ಕುರಿತ ಗೊಂದಲವನ್ನು ಬಗೆಹರಿಸಿ ರಾಜ್ ಕುಮಾರ್ ಮತ್ತು ಅಂಬರೀಷ್ ಅವರ ಸ್ಮಾರಕಗಳ ಜೊತೆಯಲ್ಲೇ ಆಗುವ ಅಂತಿಮ ನಿರ್ಧಾರ ರಾಜ್ಯ ಸರ್ಕಾರದಿಂದ ಹೊರ ಬೀಳಬೇಕು ಎಂಬ ಕೂಗು ಕೇಳಿಬಂದಿದೆ.

Not Solved Vishnuvardhan Memorial issue
Author
Bengaluru, First Published Nov 28, 2018, 8:42 AM IST

ಬೆಂಗಳೂರು :  ಕನ್ನಡ ಚಿತ್ರರಂಗದ ಮೂವರು ದಿಗ್ಗಜರಾದ ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಸ್ಮಾರಕಗಳು ಒಂದೇ ಕಡೆ ಆಗಬೇಕು ಎಂಬ ಹಕ್ಕೊತ್ತಾಯ ಬಲವಾಗಿ ಕೇಳಿಬರತೊಡಗಿದೆ. ಚಿತ್ರರಂಗದ ಕರ್ಮಭೂಮಿ ಎಂದೇ ಕರೆಸಿಕೊಳ್ಳುವ ಕಂಠೀರವ ಸ್ಟುಡಿಯೋದಲ್ಲಿ ಈ ಹಿಂದೆ ರಾಜ್ ಅವರ ಅಂತ್ಯ ಸಂಸ್ಕಾರ ಮಾಡಿ ಸ್ಮಾರಕ ನಿರ್ಮಾ ಣಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಅಂಬರೀಷ್ ಅವರ ಅಂತ್ಯ ಸಂಸ್ಕಾರವನ್ನೂ ಅಲ್ಲಿಯೇ ಮಾಡಲಾಗಿದ್ದು, ಸ್ಮಾರಕದ ನಿರ್ಮಾ ಣ ಮಾಡುವುದಾಗಿ ಸರ್ಕಾರ ಘೋಷಿಸಿದೆ. 

ಆದರೆ, ಮೂವರು ದಿಗ್ಗಜರ ಪೈಕಿ ಒಬ್ಬರಾದ ವಿಷ್ಣುವರ್ಧನ್ ಅವರ ಸ್ಮಾರಕ ಇದರಿಂದ ಹೊರಗಿದ್ದರೆ ಸರಿಯಲ್ಲ ಎಂಬ ಅಭಿಪ್ರಾಯ ವನ್ನು ಸಿನಿಪ್ರಿಯರು ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಅವರು ನಿಧನ ಹೊಂದಿ ಬರುವ ಡಿ. 30 ಕ್ಕೆ ಹತ್ತು ವರ್ಷಗಳಾಗುತ್ತದೆ. ಅಷ್ಟರೊಳಗಾಗಿ ವಿಷ್ಣು ಅವರ ಸ್ಮಾರಕ ಕುರಿತ ಗೊಂದಲವನ್ನು ಬಗೆಹರಿಸಿ ರಾಜ್ ಕುಮಾರ್ ಮತ್ತು ಅಂಬರೀಷ್ ಅವರ ಸ್ಮಾರಕಗಳ ಜೊತೆಯಲ್ಲೇ ಆಗುವ ಅಂತಿಮ ನಿರ್ಧಾರ ರಾಜ್ಯ ಸರ್ಕಾರದಿಂದ ಹೊರ ಬೀಳಬೇಕು ಎಂಬ ಕೂಗು ಕೇಳಿಬಂದಿದೆ.

ಚಲನಚಿತ್ರ ರಂಗದ ಹಿನ್ನೆಲೆ ಯುಳ್ಳ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಈಗಾಗಲೇ ಈ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಈ ವಿಷಯದಲ್ಲಿ ವಿಳಂಬ ಮಾಡದೆ ವಿಷ್ಣು ಪತ್ನಿ ಭಾರತಿ ಸೇರಿದಂತೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿ ತ್ವರಿತವಾಗಿ ನಿರ್ಧಾರ ಪ್ರಕಟಿಸಬೇಕು ಎಂಬುದು ಚಿತ್ರರಸಿಕರ ಮನದಾಳದ ಮಾತು. 

ನಗರದ ಉತ್ತರಹಳ್ಳಿ ರಸ್ತೆಯಲ್ಲಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರ ನಡೆದು ಒಂಭತ್ತು ವರ್ಷಗಳಾದರೂ ಸ್ಮಾರಕ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಆ ವಿಷಯ ಈಗ ಕಗ್ಗಂಟಾಗಿಯೇ ಪರಿಣಮಿಸಿದೆ. ನ್ಯಾಯಾಲಯದ ಮೆಟ್ಟಿಲೂ ಹತ್ತಿದೆ. ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಸಮಸ್ಯೆ ಬಗೆಹರಿಯದೇ ಇರುವುದರಿಂದ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ವಿಷ್ಣು ಕುಟುಂಬದ 
ಸದಸ್ಯರು ಒಲವು ವ್ಯಕ್ತಪಡಿಸಿ ಕಾರ್ಯಪ್ರವೃತ್ತರಾಗಿದ್ದಾರೆ. 

ಈ ಹಂತದಲ್ಲಿ ಸರ್ಕಾರ ಮತ್ತು ಚಿತ್ರರಂಗದ ಇತರ ಹಿರಿಯರು ವಿಷ್ಣುವರ್ಧನ್ ಕುಟುಂಬದವರ ಮನವೊಲಿಸಿ ಕಂಠೀರವ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಿಸಲು ಒಪ್ಪಿಸಬೇಕು. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋ ಬಿಟ್ಟು ಬೇರೊಂದು ಸ್ಥಳದಲ್ಲಿ ನಿರ್ಮಾಣವಾಗಲು ಅವಕಾಶ ನೀಡಬಾರದು ಎಂದು ಅನೇಕರು ಒತ್ತಾಯಿಸಿದ್ದಾರೆ. ಭಾನುವಾರ ಅಂಬರೀಷ್ ಅವರ ಪಾರ್ಥೀವ ಶರೀರದ  ಅಂತಿಮ ದರ್ಶನ ವೇಳೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ವಿಷ್ಣುವರ್ಧನ್ ಸ್ಮಾರಕ ಕುರಿತು ಆಪ್ತರೊಂದಿಗೆ ಪ್ರಸ್ತಾಪಿಸಿದ್ದರು. 

ಅಲ್ಲದೆ, ಅಂಬರೀಷ್ ಅವರ ಕುರಿತು ‘ಕನ್ನಡಪ್ರಭ’ ಪ್ರಕಟಿಸಿದ್ದ ತಮ್ಮ ನುಡಿನಮನದಲ್ಲೂ ಕುಮಾರಸ್ವಾಮಿ ಅವರು ಈ ಬಗ್ಗೆ ಸೂಕ್ಷ್ಣವಾಗಿ ಹೇಳಿದ್ದರು. ಕನ್ನಡ ಚಿತ್ರರಂಗದ ದಿಗ್ಗಜರಾದ ಮೂವರ ಸ್ಮಾರಕಗಳು ಒಂದೆಡೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು.

Follow Us:
Download App:
  • android
  • ios