ಎಲ್ಲಾ ವಿದ್ಯಾವಂತರಿಗೆ ಉದ್ಯೋಗ ಸಿಗುವುದು ಕಷ್ಟದ ಕೆಲಸ, ಹಾಗಾಗಿ ಸ್ವಯಂ ಉದ್ಯೋಗಿಗಳಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ಚಿಕ್ಕಮಗಳೂರು: ಎಲ್ಲಾ ವಿದ್ಯಾವಂತರಿಗೆ ಉದ್ಯೋಗ ಸಿಗುವುದು ಕಷ್ಟದ ಕೆಲಸ, ಹಾಗಾಗಿ ಸ್ವಯಂ ಉದ್ಯೋಗಿಗಳಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದರು.

 ಐಡಿಎಸ್‌ಜಿ ಕಾಲೇಜಿನಲ್ಲಿ ಸಂಜೀವಿನಿ- ಕೆಎಸ್‌ಆರ್ ಎಲ್‌ಪಿಎಸ್ ಹಾಗೂ ಜಿಪಂ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಅಭ್ಯರ್ಥಿ-ಪಾಲಕ ಪೋಷಕರಿಗೆ ಸಮಾಲೋಚನೆ, ಒಗ್ಗೂಡಿಸುವಿಕೆ ಉದ್ಯೋಗ ಮೇಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಅತಿ ಹೆಚ್ಚು ಯುವಕರಿರುವ ದೇಶವೆಂದರೆ ಅದು ಭಾರತ. 35 ವರ್ಷದ ಒಳಗಿನ ಸುಮಾರು 80 ಕೋಟಿ ಯುವ ಸಮುದಾಯದವರಿದ್ದಾರೆ. ಅವರೆಲ್ಲರಿಗೂ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಯುವಕರು ಸ್ವ ಉದ್ಯೋಗದತ್ತ ಒಲವು ಹೊಂದಬೇಕು. ಈ ಉದ್ಯೋಗ ಮೇಳದಲ್ಲಿ ಆಯ್ಕೆಯಾದವರಿಗೆ ಸ್ವ ಉದ್ಯೋಗದಲ್ಲಿ ಮೊದಲು ತರಬೇತಿ ನೀಡಲಾಗುತ್ತದೆ. ನಂತರ 50 ಸಾವಿರ ರು. ನೀಡಲಾಗುವುದು. ಅದರಲ್ಲಿ 10 ಸಾವಿರ ಸಹಾಯಧನ ಹಾಗೂ 40 ಸಾವಿರ ಸಾಲದ ರೂಪದಲ್ಲಿ ಇರುತ್ತದೆ. ಉದ್ಯೋಗಾಕಾಂಕ್ಷಿಗಳು ಸಾಲಕ್ಕಾಗಿ ತರಬೇತಿಗೆ ಸೇರದೆ ಸ್ವ ಉದ್ಯೋಗಿಗಳಾಗಬೇಕೆಂಬ ಉದ್ದೇಶದಿಂದ ಸೇರಬೇಕು ಎಂದು ಕಿವಿ ಮಾತು ಹೇಳಿದರು.

ಜಿಪಂ ಅಧ್ಯಕ್ಷೆ ಬಿ.ಎಸ್. ಚೈತ್ರಶ್ರೀ, ನೀರು, ಆಹಾರ ಇತರೆ ಮೂಲಭೂತ ಸೌಲಭ್ಯಗಳಂತೆ ಉದ್ಯೋಗವೂ ಮೂಲಭೂತ ಅವಶ್ಯಕ. ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕ ಮುಂದಿನ ವಿದ್ಯಾಭ್ಯಾಸದ ಜೀವನಕ್ಕೆ ದಾರಿಯಾಗುತ್ತದೆ. ವಿದ್ಯಾರ್ಥಿಗಳು ತಮಗೆ ಯಾವ ಕ್ಷೇತ್ರದ ಬಗ್ಗೆ ಒಲವಿರುತ್ತದೆಯೋ ಅದನ್ನೇ ಆಯ್ಕೆ ಮಾಡಿಕೊಂಡು, ಸಾಧನೆ ಮಾಡಬೇಕು ಎಂದರು.

ಜಿಪಂ ಸಂಯೋಜನಾಧಿಕಾರಿ ಡಿ.ಸಿ. ಷಡಕ್ಷರಪ್ಪ ಉದ್ಯೋಗದ ಕುರಿತು ಮಾಹಿತಿ ನೀಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೂಪಿಸಲ್ಪಟ್ಟ ಹಲವಾರು ಯೋಜನೆಗಳಲ್ಲಿ ರಾಜೀವ್ ಗಾಂಧಿ ಚೈತನ್ಯ, ಸ್ವಾವಲಂಬನಾ ಚೈತನ್ಯ, ಅಂಬೇಡ್ಕರ್ ನಿಗಮದಿಂದ ಚೀಫ್ ಮಿನಿಸ್ಟರ್ ಗ್ಯಾರಂಟಿ ಸ್ಕೀಮ್, ಪಿಎಂ ಗ್ಯಾರಂಟೀ ಸ್ಕೀಂ ಹಾಗೂ ಸಾಮಾಜಿಕಾ ಭದ್ರತಾ ಯೋಜನೆ ಇತ್ಯಾದಿಗಳು ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಹಾಗೂ ಅಟಲ್ ಫೆನ್ಶನ್ ಯೋಜನೆಗಳಲ್ಲಿ ವಿಮಾ ಸೌಲಭ್ಯಗಳಿವೆ ಎಂದು ವಿವರಿಸಿದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಲಿಂಗರಾಜು, ತಾಪಂ ಅಧ್ಯಕ್ಷ ಎ.ಆರ್. ಮಹೇಶ್, ಉಪಾಧ್ಯಕ್ಷ ವೈ.ಜಿ. ಸುರೇಶ್, ಜಿಪಂ ಸದಸ್ಯೆ ಜಸಂತಾ ಅನಿಲ್‌ಕುಮಾರ್, ಎಸ್‌ಬಿಐ, ಕಾರ್ಪೊರೇಷನ್ ಬ್ಯಾಂಕ್ ಮತ್ತಿತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.