ಚಂದ್ರಲೋಕಕ್ಕೆ ಹೋಗಿ ಎಂದ್ರೆ ಹೋಗೋಕಾಗುತ್ತಾ?: ಸಿಎಂ ಪ್ರಶ್ನೆ
ಬೆಂಗಳೂರು: ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಸಿದ್ದರಾಮಯ್ಯ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ಕುರಿತು ಸಿದ್ದರಾಮಯ್ಯ ಹಾಸ್ಯದ ಧಾಟಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
‘ಜನ ನೂರು ಹೇಳುತ್ತಾರೆ. ಅದನ್ನೆಲ್ಲ ನಂಬೋಕ್ಕಾಗಲ್ಲ. ಯಾರೋ ಚಂದ್ರಲೋಕಕ್ಕೆ ಹೋಗಿ ಎನ್ನುತ್ತಾರೆ, ಹೋಗೋಕಾಗುತ್ತಾ? ಅದೆಲ್ಲ ಗಂಭೀರವಾಗಿ ತಗೊಳ್ಳಲ್ಲ’ ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದರು.
ಗುಜರಾತ್ ಪ್ರಚಾರಕ್ಕೆ ಹೋಗಲ್ಲ: ‘ಕಾಂಗ್ರೆಸ್ಸಿನಲ್ಲಿ ಅನೇಕ ಸಮರ್ಥ ನಾಯಕರಿದ್ದಾರೆ. ಅವರೆಲ್ಲ ಗುಜರಾತ್ ಪ್ರಚಾರಕ್ಕೆ ಹೋಗುತ್ತಾರೆ. ನಾನು ಕರ್ನಾಟಕಕ್ಕೆ ಸೀಮಿತ ವಾಗಿದ್ದೇನೆ. ಹೀಗಾಗಿ ನಾನು ಗುಜರಾತ್ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ‘ಗುಜರಾತ್ ಚುನಾವಣಾ ಪ್ರಚಾರಕ್ಕೆ ಹೋಗುವಂತೆ ಹೈಕಮಾಂಡ್‌ನಿಂದ ನನಗೆ ಸೂಚನೆ ಬಂದಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಬೇಕಿದ್ದರೆ ಗುಜರಾತ್ ಪ್ರಚಾರಕ್ಕೆ ಹೋಗುತ್ತಾರೆ’ ಎಂದರು.
