ಬೆಂಗಳೂರು[ಜು.25]: ಅತೃಪ್ತ ಶಾಸಕರ ಅನರ್ಹತೆ ಕುರಿತು ಕಾಂಗ್ರೆಸ್‌ ನೀಡಿರುವ ದೂರಿನ ಬಗೆಗಿನ ವಿಚಾರಣೆಗೆ ನಿಗದಿತ ಸಮಯಕ್ಕೆ ವಿಚಾರಣೆಗೆ ಆಗಮಿಸದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಪರ ವಕೀಲರ ಅಹವಾಲು ಕೇಳದೆ ಅವರನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ವಾಪಸ್‌ ಕಳುಹಿಸಿದ ಘಟನೆ ಬುಧವಾರ ನಡೆಯಿತು.

ಕಾಂಗ್ರೆಸ್‌ ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಆದರೆ, ಶ್ರೀಮಂತ ಪಾಟೀಲ್‌ ಪರ ವಕೀಲರು ಮಧ್ಯಾಹ್ನ 3.30ಕ್ಕೆ ಸ್ಪೀಕರ್‌ ಕಚೇರಿಗೆ ಆಗಮಿಸಿದರು.

ಈ ವೇಳೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಕೋರ್ಟ್‌ ಸಮಯ ಮುಗಿದಿದೆ, ಈಗ ನಾನು ಬೇರೆ ಕಡತಗಳ ಪರಿಶೀಲನೆಯಲ್ಲಿ ಇದ್ದೇನೆ ಎಂದು ವಿಚಾರಣೆಗೆ ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ನಮಗೆ ಸಮಯದ ಬಗ್ಗೆ ಮಾಹಿತಿ ಕೊರತೆ ಇತ್ತು ಎಂದು ತಿಳಿಸಿದ ಶ್ರೀಮಂತ ಪಾಟೀಲ್‌ ಪರ ವಕೀಲರು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ವಕಾಲತು ಸಲ್ಲಿಸಿ ಹೋದರು ಎಂದು ಮೂಲಗಳು ತಿಳಿಸಿವೆ.