ಮತ್ತೆ ಕನ್ನಡಕ್ಕೆ ರೈಲ್ವೆ ಧೋಖಾ : ಕೇಂದ್ರದಿಂದಲೇ ಕಡೆಗಣನೆ

First Published 10, Feb 2018, 7:17 AM IST
Not Allowed To Kannada Signature In Railway Application
Highlights

ಹುದ್ದೆಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಸಹಿ ಮಾಡಬೇಕೆಂದು ರೈಲ್ವೆ ಇಲಾಖೆ ಹೊರಡಿಸಿರುವ ಅಧಿಸೂಚನೆಗೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದಿ ಹೇರಿಕೆ ಮಾಡುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.

ಬೆಂಗಳೂರು : ಹುದ್ದೆಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಸಹಿ ಮಾಡಬೇಕೆಂದು ರೈಲ್ವೆ ಇಲಾಖೆ ಹೊರಡಿಸಿರುವ ಅಧಿಸೂಚನೆಗೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದಿ ಹೇರಿಕೆ ಮಾಡುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.

ಫೆಬ್ರವರಿ ಮೊದಲ ವಾರದಲ್ಲಿ ರೈಲ್ವೆ ಇಲಾಖೆ ಸುಮಾರು 26,502 ಸಹಾಯಕ ಲೋಕೋಪೈಲಟ್‌ (ಎಎಲ್‌ಪಿ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ 1.8ರ ಕ್ರಮ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ತನ್ನ ಎಲ್ಲ ದಾಖಲೆಗಳಲ್ಲಿ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಒಂದೇ ರೀತಿಯಲ್ಲಿ ಸಹಿ ಮಾಡಿರಬೇಕು. ಸಹಿಯು ಬೇರೆ ಬೇರೆ ರೀತಿಯಲ್ಲಿ ಅಥವಾ ಇತರ ಭಾಷೆಗಳಲ್ಲಿ ಇರಬಾರದು. ಒಂದು ವೇಳೆ ದಾಖಲೆ ಪರಿಶೀಲನೆಯಲ್ಲಿ ವ್ಯತ್ಯಾಸ ಕಂಡುಬಂದರೆ ಆ ಅರ್ಜಿಗಳನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅಂದರೆ, ದಾಖಲೆಗಳಲ್ಲಿ ಹಿಂದಿ ಅಥವಾ ಇಂಗ್ಲಿಷ್‌ ಹೊರತುಪಡಿಸಿ ಯಾವುದೇ ರೀತಿಯ ಪ್ರಾದೇಶಿಕ ಭಾಷೆಯಲ್ಲಿ ಸಹಿ ಮಾಡಿರಬಾರದು ಎಂಬುದನ್ನು ಸ್ಪಷ್ಟವಾಗಿ ಈ ಅಧಿಸೂಚನೆಯಲ್ಲಿ ರೈಲ್ವೆ ಇಲಾಖೆ ಸೂಚಿಸಿದೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಸಹಿಯೂ ಕೂಡ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಇರಬೇಕೆಂದು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿರುವುದು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಮೇಲೆ ಗದಾಪ್ರಹಾರ ನಡೆಸಿದಂತಾಗಿದೆ. ಇದರಿಂದ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ 22 ಸಾಂವಿಧಾನಿಕ ರಾಷ್ಟ್ರಭಾಷೆಗಳನ್ನು ಕಡೆಗಣಿಸಿ, ಹಿಂದಿ ಹೇರಿಕೆ ಮಾಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ರೈಲ್ವೆ ಇಲಾಖೆಯ ಈ ಅಧಿಸೂಚನೆಯ ಮೂಲಕ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಮಾತ್ರ ಸಹಿ ಮಾಡಲು ಕಲಿತಿರುವ ಲಕ್ಷಾಂತರ ಆಕಾಂಕ್ಷಿಗಳ ಆಸೆಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ. ಕೂಡಲೇ ಈ ಅಧಿಸೂಚನೆಯನ್ನು ವಾಪಸ್‌ ಪಡೆಯಬೇಕು ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

ಕೇಂದ್ರ ಸರ್ಕಾರದ ಇತ್ತೀಚಿನ ನಡವಳಿಕೆಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಗೆಯುವ ಹೆಜ್ಜೆಗಳು. ಭಾಷಾವಾರು ಪ್ರಾಂತ್ಯ ವಿಂಗಡಣೆಯಲ್ಲಿ ರಚನೆಯಾದ ರಾಜ್ಯಗಳ ನೆಲದ ಭಾಷೆಯ ಸಾರ್ವಭೌಮತ್ವವನ್ನು ನಮ್ಮ ಸಂವಿಧಾನ ಗೌರವಿಸಿದೆ. ಅದರಂತೆ ಈ 62 ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ಆಕಾಂಕ್ಷಿಗಳಿಗೆ ಮಾನ್ಯತೆ ಸಿಕ್ಕಿದೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಹಿಂದಿ ಹೇರುವಿಕೆ ಎಲ್ಲಾ ಹಂತದಲ್ಲೂ ನೇರವಾಗಿ ನಡೆಯುತ್ತಿದೆ. ಇದು ಕೇವಲ ಭಾಷೆಯ ಪ್ರಶ್ನೆಯಲ್ಲ, ಬದುಕಿನ ಪ್ರಶ್ನೆ. ಕರ್ನಾಟಕ ರಾಜ್ಯದಲ್ಲಿ ಸೃಷ್ಟಿಯಾಗುವ ಬ್ಯಾಂಕ್‌, ರೈಲ್ವೆ, ಅಂಚೆ ಕಚೇರಿಯ ಉದ್ಯೋಗಗಳನ್ನು ರಾಜ್ಯದವರಿಗೆ ತಪ್ಪಿಸಿ ಹಿಂದಿ ಭಾಷಿಕರಾದ ಉತ್ತರ ಭಾರತದವರಿಗೆ ಕೊಡುವ ಕಾರ್ಯ ನಡೆಯುತ್ತಿದೆ ಎಂದು ಕನ್ನಡ ಸಂಘಟನೆಗಳು ಆರೋಪಿಸಿವೆ.

ಇದರಿಂದಾಗಿ ನಮ್ಮ ನೆಲದಲ್ಲೇ ನಮ್ಮ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಇದನ್ನು ಯಾವ ಜನಪ್ರತಿನಿಧಿಗಳೂ ಕೇಳುತ್ತಿಲ್ಲ. ಲಕ್ಷಾಂತರ ಉದ್ಯೋಗಗಳ ಸೃಷ್ಟಿಯ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಉದ್ಯೋಗವನ್ನೂ ಹಿಂದಿ ಮಾತನಾಡುವವರಿಗೆ ಕೊಡುವ ಹುನ್ನಾರ ನಡೆಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ನಿಯಮಾವಳಿ ರೂಪಿಸುತ್ತಿದೆ. ಇದರಿಂದ ರಾಜ್ಯ ರಾಜ್ಯಗಳ ನಡುವೆ ಅಶಾಂತಿ ಏರ್ಪಡುವ ವಾತಾವರಣ ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

 

ಕನ್ನಡಿಗರು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವವರು. ಹಾಗೆಯೇ ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸುವವರು ಎಂಬುದನ್ನು ಕೇಂದ್ರ ಅರಿತುಕೊಳ್ಳುವ ಅಗತ್ಯವಿದೆ. ಹಿಂದಿ ಹೇರಿಕೆ ಮೂಲಕ ಕನ್ನಡಿಗರ ಮತ್ತು ಕನ್ನಡದ ಅಸ್ಮಿತೆಗೆ ಧಕ್ಕೆ ತರುವಂತ ಕೆಲಸ ಕೇಂದ್ರದಿಂದ ನಡೆಯುತ್ತಿದೆ.

 ಎಸ್‌.ಜಿ.ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ರೈಲ್ವೆ ಇಲಾಖೆಯ ಈ ನಿಲುವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮಾತೃಭಾಷೆಯಲ್ಲಿ ಸಹಿ ಮಾಡಲು ಕೂಡ ಅವಕಾಶವಿಲ್ಲ ಎಂದಾದರೆ ಒಕ್ಕೂಟ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಹ ಪರಿಸ್ಥಿತಿ ಬಂದಿದೆ. ಕನ್ನಡದಲ್ಲಿ ಸಹಿ ಮಾಡಬಾರದು ಎಂದು ಹೇಳಲು ಇವರಿಗೇನು ನೈತಿಕತೆ ಇದೆ? ಕೇಂದ್ರ ಸರ್ಕಾರ ಕೂಡಲೇ ಈ ಅಧಿಸೂಚನೆ ವಾಪಸ್‌ ಪಡೆಯದಿದ್ದರೆ ದೊಡ್ಡ ಹೋರಾಟ ಅನಿವಾರ್ಯ.

ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

 

ರಾಜ್ಯ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಭಾಷೆ ವಿಚಾರವಾಗಿ ಅದಕ್ಕೇನೂ ಆಗಬೇಕಿಲ್ಲ. ತಮಿಳುನಾಡಿನಲ್ಲಿ ಹಿಂದಿ ಇಲ್ಲವೇ ಇಲ್ಲ. ಇಲ್ಲಿ ಕನ್ನಡ ಇಲ್ಲವೇ ಇಲ್ಲ. ಸಹಿಯನ್ನೂ ಕೂಡ ಅವರ ಮಾತೃಭಾಷೆಯಲ್ಲಿ ಮಾಡುವಂತಿಲ್ಲ ಅನ್ನುವುದು ಅತ್ಯಂತ ಅಗೌರವ, ಅಕ್ರಮ. ಈ ಸಮಸ್ಯೆ ವಿರುದ್ಧ ಹೋರಾಟ ಅನಿವಾರ್ಯ.

 ವಾಟಾಳ್‌ ನಾಗರಾಜ್‌, ಅಧ್ಯಕ್ಷ , ಕನ್ನಡ ಒಕ್ಕೂಟ

loader