ರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾಳಧನದ ವಿರುದ್ಧ ಸಮರ ಸಾರಿದ್ದರೂ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣ 2017ರಲ್ಲಿ ಸುಮಾರು ಶೇ.50ರಷ್ಟುಏರಿಕೆಯಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯೆಲ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾಳಧನದ ವಿರುದ್ಧ ಸಮರ ಸಾರಿದ್ದರೂ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣ 2017ರಲ್ಲಿ ಸುಮಾರು ಶೇ.50ರಷ್ಟುಏರಿಕೆಯಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ, ಸ್ವಿಸ್‌ ಬ್ಯಾಂಕಿನಲ್ಲಿರುವ ಎಲ್ಲ ಸಂಪತ್ತು ಕಪ್ಪು ಹಣ ಎಂದು ಭಾವಿಸಲು ಹೇಗಾದೀತು ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯೆಲ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ತಪ್ಪು ಮಾಡಿರುವುದು ಸಾಬೀತಾದರೆ ಅವರು ಯಾರೇ ಆಗಿರಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಸ್ವಿಜರ್ಲೆಂಡ್‌ನಲ್ಲಿ ಭಾರತೀಯರು ಹೊಂದಿರುವ ಖಾತೆಗಳಿಗೆ ಸಂಬಂಧಿಸಿದ ವಿವರಗಳು ದ್ವಿಪಕ್ಷೀಯ ಒಪ್ಪಂದದ ಹಿನ್ನೆಲೆಯಲ್ಲಿ ಶೀಘ್ರವೇ ಭಾರತಕ್ಕೆ ಲಭಿಸಲಿವೆ ಎಂದು ತಿಳಿಸಿದ್ದಾರೆ.

ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಹೊಂದಿರುವ ಒಟ್ಟು ಹಣದಲ್ಲಿ ಶೇ.40ರಷ್ಟುಉದಾರೀಕೃತ ಪಾವತಿ ಯೋಜನೆ (ಎಲ್‌ಆರ್‌ಎಸ್‌)ಗೆ ಸಂಬಂಧಿಸಿದ್ದು. ಸರ್ಕಾರದ ಅನುಮತಿ ಪಡೆಯದೇ 2.50 ಲಕ್ಷ ಡಾಲರ್‌ (1.7 ಕೋಟಿ ರು.)ವರೆಗೂ ವಿದೇಶಕ್ಕೆ ರವಾನಿಸಬಹುದಾದ ಯೋಜನೆ ಇದಾಗಿದ್ದು, ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಆರಂಭವಾಗಿತ್ತು ಎಂದು ಅವರು ಹೇಳಿದ್ದಾರೆ.

ಸ್ವಿಸ್‌ ಬ್ಯಾಂಕಿನಲ್ಲಿರುವ ಭಾರತೀಯರ ಸಂಪತ್ತಿನ ಮೇಲೆ ನಿಗಾ ಇಡುವ ಸಲುವಾಗಿ ಕೇಂದ್ರ ಸರ್ಕಾರ ಸ್ವಿಜರ್ಲೆಂಡ್‌ ಜತೆ ಒಪ್ಪಂದ ಮಾಡಿಕೊಂಡಿದೆ. 2018ರ ಜ.1ರಿಂದ 2018ರ ಡಿ.31ರವರೆಗಿನ ಮಾಹಿತಿ 2019ರಲ್ಲಿ ಲಭಿಸಲಿದೆ ಎಂದು ಪೀಯೂಷ್‌ ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭಾರಿ ಇಳಿಕೆಯಾಗಿತ್ತು. ಆದರೆ 2017ರಲ್ಲಿ ಇದು ಶೇ.50ರಷ್ಟುಏರಿಕೆಯಾಗಿ 7000 ಕೋಟಿ ರು.ಗೆ ಏರಿತ್ತು.