ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ದೂರವಾಣಿ ಸಮಾಲೋಚನೆ ನಡೆಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ತಾಳ್ಮೆ ವಹಿಸುವಂತೆ ಸಲಹೆ ಮಾಡಿದ್ದಾರೆ.

ಸೋಲ್/ಬೀಜಿಂಗ್(ಏ.25): ಒಂದಾದ ಮೇಲೊಂದರಂತೆ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಾಗತಿಕ ಸಮುದಾಯಕ್ಕೆ ತಲೆನೋವಾಗಿರುವ ಉತ್ತರ ಕೊರಿಯಾ ಮೇಲೆ ಯುದ್ಧ ಸಾರುವ ಉತ್ಸಾಹದಲ್ಲಿ ಅಮೆರಿಕ ಇರುವಾಗಲೇ, ಅಮೆರಿಕದ ತಾಳ್ಮೆ ಕೆಣಕುವಂತಹ ಪ್ರಯತ್ನಗಳನ್ನು ಉತ್ತರ ಕೊರಿಯಾ ನಡೆಸಿದೆ.

ಒಂದು ವೇಳೆ, ಅಮೆರಿಕ ಏನಾದರೂ ಯುದ್ಧ ಆರಂಭಿಸಿದರೆ, ಆ ದೇಶವನ್ನು ಭೂಮಿಯಿಂದಲೇ ಉತ್ತರ ಕೊರಿಯಾ ಅಳಿಸಿ ಹಾಕಲಿದೆ ಎಂದು ಸರ್ಕಾರದ ಮುಖವಾಣಿಯಾಗಿರುವ ಎರಡು ಮಾಧ್ಯಮಗಳು ಗುಡುಗಿವೆ.

ಈ ನಡುವೆ, ಕೊರಿಯಾ ಪೀಪಲ್ಸ್ ಆರ್ಮಿಯ 85ನೇ ವರ್ಷಾಚರಣೆ ನಿಮಿತ್ತ ಉತ್ತರ ಕೊರಿಯಾ ಮಂಗಳವಾರ ಮತ್ತೊಂದು ಅಣ್ವಸ ಪರೀಕ್ಷೆ ನಡೆಸಬಹುದು ಎಂದು ಹೇಳಲಾಗಿದೆ. ಹಾಗೇನಾದರೂ ಅದಲ್ಲಿ ಎರಡೂ ದೇಶಗಳ ನಡುವಣ ಸಂಘರ್ಷಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಲಿದೆ. ಉತ್ತರ ಕೊರಿಯಾ ಅಣ್ವಸ ಪರೀಕ್ಷೆ ನಡೆಸಬಹುದು ಎಂಬ ಕಾರಣಕ್ಕಾಗಿಯೇ ಅಮೆರಿಕ ತನ್ನ ಕಾರ್ಲ್ ವಿಲ್ಸನ್ ನೌಕೆಯನ್ನು ಕೊರಿಯಾ ಕಡೆಗೆ ರವಾನಿಸುತ್ತಿದೆ ಎಂದು ಹೇಳಲಾಗಿದೆ.

ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ದೂರವಾಣಿ ಸಮಾಲೋಚನೆ ನಡೆಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ತಾಳ್ಮೆ ವಹಿಸುವಂತೆ ಸಲಹೆ ಮಾಡಿದ್ದಾರೆ.

ಕೊರಿಯಾ ಗುಡುಗು:

ಯುದ್ಧ ಸಾರಿದರೆ ಅಮೆರಿಕವನ್ನೇ ಅಳಿಸಿ ಹಾಕುತ್ತೇವೆ ಎಂದು ಆಡಳಿತಾರೂಢ ಕಾರ್ಮಿಕರ ಪಕ್ಷದ ಮುಖವಾಣಿ ‘ರೋಡೊಂಗ್ ಸಿನ್‌ಮುನ್’ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ. ಕಾರ್ಲ್ ವಿನ್ಸನ್ ನೌಕೆಯನ್ನು ಕೊರಿಯಾ ಕಡೆಗೆ ಅಮೆರಿಕ ಕಳುಹಿಸುತ್ತಿರುವುದೇ, ಆ ದೇಶ ಆಕ್ರಮಣಕ್ಕೆ ಸಜ್ಜಾಗಿರುವ ದ್ಯೋತಕ. ಉತ್ತರ ಕೊರಿಯಾವನ್ನು ಸಿರಿಯಾ ಜತೆ ಹೋಲಿಸಿದರೆ ತಪ್ಪು ಎಣಿಕೆಯಾಗುತ್ತದೆ ಎಂದು ಉತ್ತರ ಕೊರಿಯಾದ ವೆಬ್‌ಸೈಟ್ ‘ಉರಿಮಿಂಜೋಕ್ಕಿರಿ’ ಗುಡುಗಿದೆ.