ಜಪಾನ್'ನ ದಕ್ಷಿಣಕ್ಕೆ ಫಿಲಿಪ್ಪೈನ್ಸ್ ಮತ್ತು ಹವಾಯ್ ದೇಶಗಳ ಮಧ್ಯದಲ್ಲಿರುವ ಒಂದು ಪುಟ್ಟ ದ್ವೀಪ ಗುವಾಮ್. ಇದು ಕೇವಲ 540 ಚದರ ಕಿ.ಮೀ. ವಿಸ್ತೀರ್ಣವಿರುವ ಪ್ರದೇಶವಾಗಿದ್ದು, ಒಂದೂವರೆ ಲಕ್ಷ ಜನಸಂಖ್ಯೆ ಹೊಂದಿದೆ. ಅಮೆರಿಕದ ಆಡಳಿತದಲ್ಲಿರುವ ಗುವಾಮ್'ನಲ್ಲಿ ಅಮೆರಿಕದ ಸಬ್'ಮರೀನ್'ಗಳು ಸೇರಿದಂತೆ ಸಾಕಷ್ಟು ಯುದ್ಧ ಸಾಮಗ್ರಿಗಳಿವೆ.
ವಾಷಿಂಗ್ಟನ್(ಆ. 09): ಅಮೆರಿಕದ ಆಡಳಿತವಿರುವ ಗುವಾಮ್ ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಲು ಉತ್ತರ ಕೊರಿಯಾ ಸಜ್ಜಾಗಿರುವ ಸುದ್ದಿ ಅಪ್ಪಳಿಸಿದೆ. ಸ್ವತಃ ಉತ್ತರ ಕೊರಿಯಾ ಸೇನೆಯ ವಕ್ತಾರರೇ ಈ ವಿಷಯವನ್ನು ತಿಳಿಸಿದ್ದಾರೆ. ಅಮೆರಿಕಕ್ಕೆ ಅಪಾಯ ತರುವಂಥ ಕೆಲಸವೇನಾದರೂ ಮಾಡಿದರೆ ಉತ್ತರ ಕೊರಿಯಾ ದೇಶಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಕೊಟ್ಟ ಕೆಲ ಹೊತ್ತಿನಲ್ಲೇ ಉತ್ತರ ಕೊರಿಯಾದ ಸೇನೆ ಯುದ್ಧದ ಮಾತುಗಳನ್ನಾಡಿರುವುದು ಗಮನಾರ್ಹ.
ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜೋಂಗ್ ಉನ್ ಅವರು ಹಸಿರು ನಿಶಾನೆ ತೋರಿಸಿದ ಕೂಡಲೇ ಕ್ಷಿಪಣಿಗಳು ಗುವಾಂ ದೇಶದ ಮೇಲೆ ಅಪ್ಪಳಿಸಲಿವೆ ಎಂದು ಸೇನೆಯ ವಕ್ತಾರರು ಹೇಳಿಕೆ ನೀಡಿದ್ದಾರೆ.
ಅಮೆರಿಕವೇನಾದರೂ ಉತ್ತರ ಕೊರಿಯಾದ ಮೇಲೆ ಎರಗಿ ಬಂದರೆ ಮಹಾಯುದ್ಧವೇ ಸಂಭವಿಸಲಿದೆ. ಅಮೆರಿಕ ಸೇರಿದಂತೆ ಉತ್ತರ ಕೊರಿಯಾದ ವೈರಿಗಳೆಲ್ಲರನ್ನೂ ಸರ್ವನಾಶ ಮಾಡಿಬಿಡುತ್ತೇವೆ ಎಂದು ಉತ್ತರ ಕೊರಿಯಾ ಸೇನೆಯ ಮತ್ತೊಬ್ಬ ವಕ್ತಾರರು ಆರ್ಭಟಿಸಿದ್ದಾರೆ.
ಎಲ್ಲಿದೆ ಗುವಾಮ್?
ಜಪಾನ್'ನ ದಕ್ಷಿಣಕ್ಕೆ ಫಿಲಿಪ್ಪೈನ್ಸ್ ಮತ್ತು ಹವಾಯ್ ದೇಶಗಳ ಮಧ್ಯದಲ್ಲಿರುವ ಒಂದು ಪುಟ್ಟ ದ್ವೀಪ ಗುವಾಮ್. ಇದು ಕೇವಲ 540 ಚದರ ಕಿ.ಮೀ. ವಿಸ್ತೀರ್ಣವಿರುವ ಪ್ರದೇಶವಾಗಿದ್ದು, ಒಂದೂವರೆ ಲಕ್ಷ ಜನಸಂಖ್ಯೆ ಹೊಂದಿದೆ. ಅಮೆರಿಕದ ಆಡಳಿತದಲ್ಲಿರುವ ಗುವಾಮ್'ನಲ್ಲಿ ಅಮೆರಿಕದ ಸಬ್'ಮರೀನ್'ಗಳು ಸೇರಿದಂತೆ ಸಾಕಷ್ಟು ಯುದ್ಧ ಸಾಮಗ್ರಿಗಳಿವೆ.
ಉತ್ತರ ಕೊರಿಯಾ-ಅಮೆರಿಕ ತಿಕ್ಕಾಟ:
ಉತ್ತರ ಕೊರಿಯಾ ಮತ್ತು ಅಮೆರಿಕ ನಡುವಿನ ಸಂಘರ್ಷ ಹಲವು ದಶಕಗಳ ಹಿಂದಿನದ್ದು. ನಿರಂತರವಾಗಿ ಕೋಲ್ಡ್ ವಾರ್ ನಡೆಯುತ್ತಲೇ ಇದೆ. ಆದರೆ, ಕಳೆದೊಂದು ವರ್ಷದಲ್ಲಿ ಉತ್ತರ ಕೊರಿಯಾ ಎರಡು ಪರಮಾಣು ಮತ್ತು ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತು ಈ ಕ್ಷಿಪಣಿಗಳು ಅಮೆರಿಕದ ಮೂಲೆ ಮೂಲೆಯನ್ನೂ ತಲುಪಬಲ್ಲವೆನ್ನಲಾಗಿದೆ. ಇದು ಅಮೆರಿಕವನ್ನು ಇನ್ನಷ್ಟು ಕೆರಳಿಸಿದೆ. ಒಂದು ವರ್ಷದಿಂದ ಪೂರ್ವ ಏಷ್ಯಾದ ತುತ್ತತುದಿಯಲ್ಲಿ ಯುದ್ಧದ ಕಾರ್ಮೋಡ ನಿಂತಿದೆ. ಯಾವಾಗ ಬೇಕಾದರೂ ಯುದ್ಧದ ಕಿಡಿ ಹೊತ್ತಿಕೊಳ್ಳಬಹುದೆನ್ನಲಾಗಿದೆ.