ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಮತ್ತೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುತ್ತಿದೆ. ಇದಕ್ಕೂ ಮುನ್ನ ಜು.18ರಿಂದ ವಿವಿಧ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಸತ್ಯಾಗ್ರಹ ಹಮ್ಮಿಕೊಳ್ಳಲು ಕನ್ನಡ ಒಕ್ಕೂಟ ನಿರ್ಧರಿಸಿದೆ. 

ಬೆಂಗಳೂರು : ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಆಗಸ್ಟ್‌ ಮೊದಲ ವಾರದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು, ಇದಕ್ಕೂ ಮುನ್ನ ಜು.18ರಿಂದ ವಿವಿಧ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಸತ್ಯಾಗ್ರಹ ಹಮ್ಮಿಕೊಳ್ಳಲು ಕನ್ನಡ ಒಕ್ಕೂಟ ನಿರ್ಧರಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಮೊದಲ ಹಂತವಾಗಿ ಜು.18ಕ್ಕೆ ದಾವಣಗೆರೆ, 19ಕ್ಕೆ ಹುಬ್ಬಳ್ಳಿ, 20ಕ್ಕೆ ಬೆಳಗಾವಿ ಹಾಗೂ 21ರಂದು ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಸತ್ಯಾಗ್ರಹ ನಡೆಯಲಿದೆ. ಈ ಚಳವಳಿಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರವೀಣ್‌ಕುಮಾರ್‌ ಶೆಟ್ಟಿ, ಸಾ.ರಾ.ಗೋವಿಂದು, ಶಿವರಾಮೇಗೌಡ, ಕೆ.ಆರ್‌.ಕುಮಾರ್‌, ಮಂಜುನಾಥ್‌ ದೇವ್‌ ಸೇರಿದಂತೆ ರಾಜ್ಯದ ಎರಡು ಸಾವಿರಕ್ಕೂ ಹೆಚ್ಚು ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ವಾಟಾಳ್‌ ತಿಳಿಸಿದರು.

ಕರ್ನಾಟಕ ಏಕೀಕರಣಗೊಂಡು ಅರವತ್ತು ವರ್ಷವಾದರೂ ಉತ್ತರ ಕರ್ನಾಟಕ ಅಭಿವೃದ್ಧಿ ಕಂಡಿಲ್ಲ. ಹೈದರಾಬಾದ್‌-ಕರ್ನಾಟಕದ ಅಭಿವೃದ್ದಿಗೆ 371ಜೆ ಕಲಂ ಜಾರಿಯಾಗಿದ್ದರೂ ಅನುಷ್ಠಾನವಾಗಿಲ್ಲ. ಆ ಭಾಗದ ಯುವಕರು ಪದವಿ ಪಡೆದು ಉದ್ಯೋಗವಿಲ್ಲದೆ ಮನೆಯಲ್ಲಿದ್ದಾರೆ. ಹೀಗಾಗಿ ಆ ಭಾಗಕ್ಕೆ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಅವಶ್ಯವಿರುವ ಎಲ್ಲ ಸೌಕರ್ಯ ಕಲ್ಪಿಸಬೇಕು. ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಸದನದಲ್ಲಿ ಕರ್ನಾಟಕವನ್ನು ಎರಡು ಭಾಗಗಳಾಗಿ ಮಾಡುವ ಮಾತನ್ನು ಆಡುತ್ತಿದ್ದಾರೆ. ಕರ್ನಾಟಕ ಎರಡು ಹೋಳು ಮಾಡಿದರೆ ಮತ್ತೆ ಅನ್ಯಾಯ ಆಗುವುದು ಖಚಿತ. ರಾಜ್ಯವನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಲು ಬಿಡುವುದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು.ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ನಿರಂತರವಾಗಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕನ್ನಡದ ಬಗ್ಗೆ ಮಾತನಾಡುವ ಹಕ್ಕಿಲ್ಲ

ಉದ್ಯಮಿಗಳಾದ ಕಿರಣ್‌ ಮಜುಂದಾರ್‌ ಶಾ, ಮೋಹನ್‌ದಾಸ್‌ ಪೈ, ನಿಲೇಕಣಿ ಇವರಾರ‍ಯರೂ ಕನ್ನಡ ಅಭಿವೃದ್ಧಿಗೆ ಏನೂ ಮಾಡಿಲ್ಲ. ಹಾಗಾಗಿ ಕನ್ನಡಿಗರ ಏಳ್ಗೆ ಬಯಸದವರಿಗೆ ಕನ್ನಡದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ವಾಟಾಳ್‌ ವಾಗ್ದಾಳಿ ನಡೆಸಿದರು.