ಬೆಂಗಳೂರು[ಸೆ.27]: ಈ ಬಾರಿ ಸುರಿದ ಭಾರೀ ಮಳೆಯಿಂದ ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹಕ್ಕೀಡಾಗಿದ್ದವು. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಜನತೆ ಮನೆ, ಜಾನುವಾರುಗಳನ್ನು ಕಳೆದು ಪರಿಹಾರ ಕೇಂದ್ರದತ್ತ ಮುಖ ಮಾಡಿದ್ದರು. ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿ ನೀರು ಹರಿಸಿದ ಪರಿಣಾಮದಿಂದ ಜನರು ಮತ್ತಷ್ಟು ಸಂಕಷ್ಟವನ್ನೆದುರಿಸಿದ್ದರು. ಹೀಗಿದ್ದರೂ ಕೇಂದ್ರ ಸರ್ಕಾರ ಮಾತ್ರ ಯಾವುದೇ ಪರಿಹಾರ ಒದಗಿಸಿಲ್ಲ. ಸದ್ಯ ಕೇಂದ್ರದ ಈ ನಿರ್ಲಕ್ಷ್ಯದಿಂದ ಬೇಸತ್ತ ಕನ್ನಡಿಗರು ಟ್ವಿಟರ್‌ನಲ್ಲಿ ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಪ್ರವಾಹಕ್ಕೆ ತತ್ತರಿಸಿದ ಕರ್ನಾಟಕ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೌದು ಮಳೆಯರಾಯನ ಅಬ್ಬರದಿಂದ ಅಪಾರ ಪ್ರಮಾಣದ ಹಾನಿಯುಂಟಾಗಿತ್ತು. ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಕಣ್ಣೆದುರೇ ತಾವು ಬೆಳೆದ ಬೆಳೆ, ಮುದ್ದಿನಿಂದ ಸಾಕಿದ ಜಾನುವಾರುಗಳು, ಬೆವರು ಹರಿಸಿ ಕಟ್ಟಿದ ಮನೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡು ಕಣ್ಣೀರು ಹರಿಸುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಅಳಿದುಳಿದ ಸಾಮಗ್ರಿಗಳನ್ನೆತ್ತಿ ಪರಿಹಾರ ಕೇಂದ್ರದತ್ತ ಜನರು ಹೆಜ್ಜೆ ಹಾಕಿದ್ದರು. ಸದ್ಯ ಮಳೆಯಬ್ಬರ ಕಡಿಮೆಯಾಗಿದೆ. ಮನೆಗೆ ತೆರಳುವ ಸಮಯ ಬಂದಿದೆ. ಆದರೆ ಕೊಚ್ಚಿ ಹೋದ ಬದುಕನ್ನು ಸರಿಪಡಿಸುವುದೇ ಪ್ರವಾಹ ಸಂಸತ್ರಸ್ತರಿಗಿರುವ ಬಹುದೊಡ್ಡ ಸವಾಲು.

ರಾಜ್ಯ ಸರ್ಕಾರ ಪ್ರವಾಹ ಸಂಸತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿದೆಯಾದರೂ, ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಕೊಂಚವೂ ತಲೆ ಕೆಡಿಸಿಕೊಂಡಿಲ್ಲ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ, ಸದ್ಯ ಆರ್ಥಿಕ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಪ್ರವಾಹ ಪೀಡಿತ ಪ್ರದೇಶಗಳಿವಗೆ ಭೇಟಿ ನೀಡಿದ್ದರಾದರೂ ಪರಿಹಾರ ತರಿಸಿಕೊಟ್ಟಿಲ್ಲ. ಪ್ರಧಾನಿ ಮೋದಿಯೂ ಚಂದ್ರಯಾನ 2 ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಭೇಟಿ ನೀಡಿದರೂ ಪ್ರವಾಹದ ಕುರಿತು ಮಾಹಿತಿ ಪಡೆಯಲಿಲ್ಲ. ಇನ್ನು ರಾಜ್ಯದಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿರುವ ಸಂಸದರೂ ಈ ಬಗ್ಗೆ ಮೌನ ವಹಿಸಿದ್ದಾರೆ. 

ಕೇಂದ್ರದ ಈ ನಡೆಯಿಂದ ಬೇಸತ್ತ ಜನ ಸದ್ಯ ಟ್ವಿಟರ್ ನಲ್ಲಿ #NorthKarnatakaBelongsToIndia ಎಂಬ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಅತ್ತ ಗುಜರಾತ್ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದ್ದು, ಕರ್ನಾಟಕದ ವಿಚಾರವಾಗಿ ಯಾಕಿಷ್ಟು ಮೌನ ವಹಿಸಿದೆ ಎಂದು ಪ್ರಶ್ನಿಸಲಾರಂಭಿಸಿದ್ದಾರೆ.  ಈ ಹ್ಯಾಷ್ ಟ್ಯಾಗ್ ಟ್ರೆಂಡ್ ಮೂಡಿಸಿದ್ದು, ಸಾವಿರಾರು ಮಂದಿ ಟ್ವೀಟ್ ಮಾಡಿ ಪರಿಹಾರ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ.

#NorthKarnatakaBelongsToIndia, ಉತ್ತರ ಕರ್ನಾಟಕವೂ ಭಾರತದ ಭಾಗ ಎಂಬ ಅಭಿಯಾನದಡಿ ಟ್ವೀಟ್ ಮಾಡುತ್ತಿರುವ ನೆಟ್ಟಿಗರು, ಕೇಂದ್ರ ಸರ್ಕಾರ ಪರಿಹಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಮಲತಾಯಿ ಧೋರಣೆ ತೋರಿಸಬೇಡಿ, ತೆರಿಗೆ ನಾವು ಕಟ್ಟುತ್ತೇವೆ ಈಗ ಪರಿಹಾರ ನೀಡಿ ಎಂಬಿತ್ಯಾದಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲದ್ಲಿ ಹೌಡಿ ಮೋದಿ ಕಾರ್ಯಕ್ರಮದ ಕುರಿತಾಗಿಯೂ ಉಲ್ಲೇಖಿಸಿದ್ದು, ವಿದೇಶದಲ್ಲಿ ನೀವು 'ಎಲ್ಲ ಚೆನ್ನಾಗಿದೆ' ಎಂದು ಹೇಗೆ ಹೇಳಿದ್ರಿ? ಉತ್ತರ ಕರ್ನಾಟಕ 2 ತಿಂಗಳಿನಿಂದ ಪ್ರವಾಹದಿಂದ ತತ್ತರಿಸಿದೆ. ಎಂಬುವುದು ನಿಮಗೆ ತಿಳಿದಿದೆಯಾ? ಎಂದು ಪ್ರಧಾನಿ ಮೋದಿಗೆ ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿಯೂ ಈ ಅಭಿಯಾನದಡಿ ಟ್ವೀಟ್ ಮಾಡಿದ್ದು, ಮಾನ್ಯ ಯಡಿಯೂರಪ್ಪನವರೇ, ನಿಮಗೆ ಹಾಗೂ 25 ಬಿಜೆಪಿಯ ಸಂಸದರಿಗೆ ಪ್ರಧಾನಮಂತ್ರಿಗಳ‌‌ ಜೊತೆ ರಾಜ್ಯದ ನೆರೆ ಪರಿಸ್ಥಿತಿಯ ಕುರಿತು ಗಟ್ಟಿಯಾಗಿ ಮಾತನಾಡುವ ಧೈರ್ಯ ಇಲ್ಲ‌ ಎಂದಾದರೆ ನಾವೂ ನಿಮ್ಮ ಜೊತೆ ದೆಹಲಿಗೆ ಬರುತ್ತೇವೆ. ಸರ್ವ ಪಕ್ಷ ನಿಯೋಗದ ಜೊತೆ ಪ್ರಧಾನಿಗಳನ್ನು ಭೇಟಿ ಮಾಡೋಣ ಎಂದಿದ್ದಾರೆ.

ಇನ್ನಾದರೂ ಸರ್ಕಾರ ಎಚ್ಚೆತ್ತು, ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಯತ್ನಿಸುತ್ತಿರುವ ಪ್ರವಾಹ ಸಂಸತ್ರಸ್ತರಿಗೆ ಪರಿಹಾರ ಘೋಷಿಸುತ್ತಾ ಕಾದು ನೋಡಬೇಕು.