ಬೆಂಗಳೂರು :  ಮೇಲ್ಮೈ ಸುಳಿಗಾಳಿ ಹಾಗೂ ವಾತಾವರಣದಲ್ಲಿ ಗಾಳಿಯ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಮುಂದಿನ ಎರಡು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಪೂರ್ವ ಮುಂಗಾರು ಅವಧಿಯಲ್ಲಿ ಈ ರೀತಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ ಆಗುತ್ತದೆ. ಭಾರೀ ಪ್ರಮಾಣದಲ್ಲಿ ಮಳೆ ಆಗುವ ಸಾಧ್ಯತೆ ಕಡಿಮೆ. ಮಳೆ ಬೀಳುವ ವೇಳೆಯಲ್ಲಿ ಮಾತ್ರ ಬಿಸಿಲಿನ ಪ್ರಮಾಣ ಕಡಿಮೆ ಆಗಲಿದೆ. ಅದನ್ನು ಬಿಟ್ಟರೆ ಉಷ್ಣಾಂಶದಲ್ಲಿ ಭಾರೀ ವ್ಯತ್ಯಾಸ ಉಂಟಾಗುವ ಸಾಧ್ಯತೆ ಕಡಿಮೆ. ಯಥಾಪ್ರಕಾರ ಉಷ್ಣಾಂಶ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್‌ ಗವಾಸ್ಕರ್‌ ಮಾಹಿತಿ ನೀಡಿದ್ದಾರೆ.

ಭಾನುವಾರ ರಾತ್ರಿ 8 ಗಂಟೆ ವೇಳೆಗೆ ಚಿತ್ರದುರ್ಗದಲ್ಲಿ ಅತಿ ಹೆಚ್ಚು 23.9 ಮಿ.ಮೀ. ಮಳೆಯಾದ ವರದಿ ಆಗಿದೆ. ಉಳಿದಂತೆ ರಾಯಚೂರಿನಲ್ಲಿ 23, ಕೊಡಗು 22, ಗದಗ 14 ಕಲಬುರಗಿ 13, ಯಾದಗಿರಿ 12, ಬಳ್ಳಾರಿ 9.9, ಚಿಕ್ಕಮಗಳೂರು 8.5, ದಾವಣಗೆರೆ 5.6, ತುಮಕೂರು 3, ಕೊಪ್ಪಳ 2.2 ಹಾಗೂ ಹಾಸನದಲ್ಲಿ 2 ಮಿ.ಮೀ. ಮಳೆಯಾದ ವರದಿ ಆಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

ಬಳ್ಳಾರಿಯಲ್ಲಿ 40.6 ಉಷ್ಣಾಂಶ:  ಬಳ್ಳಾರಿಯಲ್ಲಿ ಅತಿ ಹೆಚ್ಚು 40.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದರೆ, ಚಿಕ್ಕಮಗಳೂರಿನಲ್ಲಿ ಅತಿ ಕಡಿಮೆ 19.8 ಡಿಗ್ರಿ ಸೆಲ್ಸಿಯಸ್‌ ಬೆಂಗಳೂರು ನಗರದಲ್ಲಿ 36.74 ಗರಿಷ್ಠ, 22.09 ಕನಿಷ್ಠ, ದಾವಣಗೆರೆಯಲ್ಲಿ 39.22 ಗರಿಷ್ಠ, 22.28 ಕನಿಷ್ಠ, ಧಾರವಾಡದಲ್ಲಿ 39.05 ಗರಿಷ್ಠ 20.42 ಕನಿಷ್ಠ, ಉಡುಪಿಯಲ್ಲಿ 33.92 ಗರಿಷ್ಠ 23.18 ಕನಿಷ್ಠ, ಮೈಸೂರಿನಲ್ಲಿ 37.41 ಗರಿಷ್ಠ 22.01 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಒಟ್ಟಾರೆ ರಾಜ್ಯದ ಶೇ.73ರಷ್ಟುಭಾಗದಲ್ಲಿ 36ರಿಂದ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.