ಉತ್ತಮ ಬೆಳೆ ಮತ್ತು ಉತ್ತಮ ಬೆಲೆ ಸಿಗಲಾರದೇ ಸಂಕಷ್ಟದಲ್ಲಿರುವ ದೇಶದ ರೈತಾಪಿ ವಲಯಕ್ಕೆ ಕೇಂದ್ರ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ.

ನವದೆಹಲಿ : ಉತ್ತಮ ಬೆಳೆ ಮತ್ತು ಉತ್ತಮ ಬೆಲೆ ಸಿಗಲಾರದೇ ಸಂಕಷ್ಟದಲ್ಲಿರುವ ದೇಶದ ರೈತಾಪಿ ವಲಯಕ್ಕೆ ಕೇಂದ್ರ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ.

ಕೃಷಿ ಚಟುವಟಿಕೆಗಳ ಜೀವನಾಡಿಯಾದ ಮುಂಗಾರು ಮಾರುತಗಳ ಮೇಲೆ ಪರಿಣಾಮ ಬೀರುವ ಎಲ್‌ ನಿನೋ ಈ ಬಾರಿ ತನ್ನ ಪ್ರಭಾವ ಬೀರುವ ಸಾಧ್ಯತೆ ಇರದ ಕಾರಣ ಉತ್ತಮ ಮುಂಗಾರು ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಆಶಾಭಾವನೆ ವ್ಯಕ್ತಪಡಿಸಿದೆ. ಇದು ಮುಂಗಾರು ಹಂಗಾಮು ರೈತರಿಗೆ ವರ ಕೊಡಬಹುದು ಎಂಬ ಮುನ್ಸೂಚನೆ ನೀಡಿದೆ.

ಮುಂಗಾರು ಆಗಮನದ ಬಗ್ಗೆ ಹವಾಮಾನ ಇಲಾಖೆ ಅಧಿಕೃತವಾಗಿ ಮುನ್ಸೂಚನೆ ನೀಡಲು ಇನ್ನೂ 15 ದಿವಸ ಬಾಕಿ ಇದೆ. ಆದರೆ ಹವಾಮಾನ ಇಲಾಖೆಗೆ ಈಗ ‘ಎಲ್‌ ನಿನೋ’ ಪ್ರಭಾವದ ಬಗ್ಗೆ ಸುಳಿವು ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಬೀಳಬಹುದು ಎಂದು ಆಶಾಭಾವನೆ ಹೊಂದಿದೆ ಎಂದು ಇಲಾಖಾ ಮೂಲಗಳು ಹೇಳಿವೆ.

‘ಎಲ್‌ ನಿನೋ’ ಪ್ರಭಾವದಿಂದಾಗಿ ಪೆಸಿಫಿಕ್‌ ಸಮುದ್ರದ ಮೇಲ್ಮೈ ಬಿಸಿಯಾಗುತ್ತದೆ. ಇದರಿಂದ ಮುಂಗಾರು ಕುಂಠಿತವಾಗುತ್ತದೆ. ಆದರೆ ಈ ಬಾರಿ ಎಲ್‌ ನಿನೋ ಪ್ರಭಾವ ಇರದು ಎಂಬ ಮಾಹಿತಿ ಹವಾಮಾನ ತಜ್ಞರಿಗೆ ಲಭಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.