ಟಿಕೆಟ್ ವಂಚನೆ ಕೇಸಲ್ಲಿ ರೇಣುಕಾ ಚೌಧರಿ ವಿರುದ್ಧ ಜಾಮೀನು ರಹಿತ ವಾರೆಂಟ್
ಟಿಕೆಟ್ ವಂಚನೆ ಕೇಸಲ್ಲಿ ರೇಣುಕಾ ಚೌಧರಿ ವಿರುದ್ಧ ಜಾಮೀನು ರಹಿತ ವಾರೆಂಟ್| ವಿಧಾನಸಭಾ ಟಿಕೆಟ್ ಕೊಡಿಸಲು 1.20 ಕೋಟಿ ರು. ಹಣ ಪಡೆದಿದ್ದ ಆರೋಪ
ತೆಲಂಗಾಣ[ಆ.31]: ವ್ಯಕ್ತಿಯೊಬ್ಬರಿಗೆ ವಿಧಾನಸಭಾ ಟಿಕೆಟ್ ಕೊಡಿಸಲು 1.20 ಕೋಟಿ ರು. ಹಣ ಪಡೆದಿದ್ದ ಆರೋಪದ ಪ್ರಕರಣವೊಂದರ ಸಂಬಂಧ, ಕೇಂದ್ರದ ಮಾಜಿ ಸಚಿವೆ, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ವಿರುದ್ಧ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಪ್ರಕರಣ ಸಂಬಂಧ ಹಲವು ಬಾರಿ ನೋಟಿಸ್ ನೀಡಿದರೂ, ರೇಣುಕಾ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇದೀಗ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.
ಏನಿದು ಪ್ರಕರಣ?
2014ರ ವಿಧಾನಸಭೆ ಚುನಾವಣೆಯಲ್ಲಿ ವೈರಾ ಕ್ಷೇತ್ರದಿಂದ ಸ್ಪರ್ಧೆಗೆ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ತಮ್ಮ ಪತಿ ರಾಮ್‌ಜಿ ನಾಯ್ಕರಿಂದ ರೇಣುಕಾ 1.20 ಕೋಟಿ ರು. ಪಡೆದಿದ್ದರು. ಆದರೆ ಅವರು ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದರು, ಜೊತೆಗೆ ಹಣವೂ ಹಿಂತಿರುಗಿಸದೇ ವಂಚಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾದ ಪತಿ ಸಾವನ್ನಪ್ಪಿದ್ದರು ಎಂದು ಅವರ ಪತ್ನಿ ಬುಕ್ಯಾ ಚಂದ್ರಕಲಾ ಅವರು ರೇಣುಕಾ ವಿರುದ್ಧ ವಂಚನೆ, ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.