ನನ್ನ ಬಗ್ಗೆ ಅಸಮಾಧಾನಗೊಂಡು ಇದುವರೆಗೂ ಯಾರೂ ಪಕ್ಷ ಬಿಟ್ಟಿಲ್ಲ. ಮುಂದೆಯೂ ಯಾರೂ ಪಕ್ಷ ಬಿಡುವುದಿಲ್ಲ. ಯಾವ ಶಾಸಕರೂ ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ. ಈ ಬಗೆಗೆ ಇರುವ ಮಾಹಿತಿಯೆಲ್ಲ ಸುಳ್ಳು.ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಮೇ.10): ನನ್ನ ಬಗ್ಗೆ ಅಸಮಾಧಾನಗೊಂಡು ಇದುವರೆಗೂ ಯಾರೂ ಪಕ್ಷ ಬಿಟ್ಟಿಲ್ಲ. ಮುಂದೆಯೂ ಯಾರೂ ಪಕ್ಷ ಬಿಡುವುದಿಲ್ಲ. ಯಾವ ಶಾಸಕರೂ ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ. ಈ ಬಗೆಗೆ ಇರುವ ಮಾಹಿತಿಯೆಲ್ಲ ಸುಳ್ಳು.
ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ನಾಯಕರು ಪಕ್ಷ ಬಿಟ್ಟ ನಂತರ ನನ್ನ ಮೇಲೆ ಆರೋಪ ಮಾಡುತ್ತಾರೆ. ಆದರೆ, ಅವರು ಬಿಡಲು ಅವರದ್ದೇ ಆದ ಬೇರೆ ಕಾರಣಗಳಿದ್ದವು. ಉದಾಹರಣೆಗೆ ನಾನು ಸಚಿವ ಸಂಪುಟದಿಂದ 12 ಮಂದಿಯನ್ನು ಕೈಬಿಟ್ಟಿದ್ದೆ. ಆದರೆ, ಶ್ರೀನಿವಾಸ ಪ್ರಸಾದ್ ಅವರು ಮಾತ್ರ ಪಕ್ಷ ತ್ಯಜಿಸಿದರು. ಪಕ್ಷ ಬಿಟ್ಟ ನಂತರ ನನ್ನ ಮೇಲೆ ಆರೋಪ ಮಾಡಿದರು. ಇನ್ನು ಎಸ್.ಎಂ.ಕೃಷ್ಣ ಪಕ್ಷ ಬಿಡಲು ಅವರದ್ದೇ ಆದ ಕಾರಣಗಳಿದ್ದವು ಎಂದು ಹೇಳಿದರು.
ವಿಶ್ವನಾಥ್ ರೋಮಾಂಚನದ ಬಗ್ಗೆ ಅವರನ್ನೇ ಕೇಳಿ:
ಇನ್ನು ತಮ್ಮ ಬಗ್ಗೆ ವಿಶ್ವನಾಥ್ ಮಾಡಿದ್ದಾರೆ ಎಂಬ ಆರೋಪಗಳ ಬಗ್ಗೆ ಮಾತನಾಡಿದ ಅವರು, ನನ್ನ ಪ್ರಕಾರ ವಿಶ್ವನಾಥ್ ಪಕ್ಷ ಬಿಡುವುದಿಲ್ಲ ಎಂದರು. ನಿಮ್ಮನ್ನು ಸಿಎಂ ಮಾಡಿದಾಗ ರೋಮಾಂಚನವಾಯ್ತು. ಆದರೆ, ಈಗ ಆ ಥ್ರಿಲ್ ಉಳಿದಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ವಿಶ್ವನಾಥ್‌ಗೆ ಯಾವಾಗ ರೋಮಾಂಚನವಾಯ್ತು ಎಂಬ ಬಗ್ಗೆ ನೀವು ಅವರನ್ನೇ ಕೇಳಬೇಕು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.