Asianet Suvarna News Asianet Suvarna News

ಕರ್ನಾಟಕದ ಗಡಿಗ್ರಾಮಗಳಿಗೆ ‘ಮಹಾ’ ಜಲದಿಗ್ಬಂಧನ

ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯದ 20ಕ್ಕೂ ಅಧಿಕ ಗ್ರಾಮಗಳಿಗೆ ಬರುತ್ತಿದ್ದ ಖಾಸಗಿ ಟ್ಯಾಂಕರ್‌ ನೀರಿಗೂ ತಡೆ ನೀಡುವ ಮೂಲಕ ಜಲದಿಗ್ಬಂಧನ ಹೇರಿದೆ.

No Water Supply From Karnataka Border Villages From Maharashtra
Author
Bengaluru, First Published Jun 6, 2019, 8:16 AM IST

ಅಥಣಿ :  ನೆರೆಯ ಮಹಾರಾಷ್ಟ್ರವು ಕೋಯ್ನಾದಿಂದ ನೀರು ಬಿಡದೆ ಬೇಸಿಗೆಯಲ್ಲಿ ರಾಜ್ಯದ ಜನರಿಗೆ ಕುಡಿಯಲು ಕೂಡ ನೀರು ಕೊಡಲಿಲ್ಲ. ಇನ್ನೊಂದೆಡೆ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯದ 20ಕ್ಕೂ ಅಧಿಕ ಗ್ರಾಮಗಳಿಗೆ ಬರುತ್ತಿದ್ದ ಖಾಸಗಿ ಟ್ಯಾಂಕರ್‌ ನೀರಿಗೂ ತಡೆ ನೀಡುವ ಮೂಲಕ ಜಲದಿಗ್ಬಂಧನ ಹೇರಿದೆ.

ಇದುವರೆಗೆ ಗಡಿಕ್ಯಾತೆ ಮಾಡುತ್ತಿದ್ದ ಮಹಾರಾಷ್ಟ್ರ ನೀರಿನಲ್ಲಿಯೂ ತನ್ನ ಉದ್ದಟತನ ಪ್ರದರ್ಶಿಸುವ ಮೂಲಕ ಗಡಿಯಲ್ಲಿರುವ ಕನ್ನಡಿಗರ ಮೇಲೆ ತನ್ನ ಪರೋಕ್ಷ ಆಕ್ರೋಶ ಹೊರಹಾಕುತ್ತಿದೆ. ಅಥಣಿ ತಾಲೂಕಿನ ಗಡಿಗ್ರಾಮಗಳಿಗೆ ಯಾವುದೇ ಕಾರಣಕ್ಕೂ ನೀರು ಹೋಗದಂತೆ ಅಲ್ಲಿನ ಜನಪ್ರತಿನಿಧಿಗಳು ಮೌಖಿಕ ಆದೇಶ ನೀಡಿದ್ದಾರೆ. ಹೀಗಾಗಿ ಗಡಿಭಾಗದಲ್ಲಿರುವ ಸುಮಾರು 20 ರಿಂದ 22 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಈಗ ತೀವ್ರವಾಗಿ ಕಾಡತೊಡಗಿದೆ.

ಮಹಾರಾಷ್ಟ್ರದಿಂದಲೇ ನೀರು ಪೂರೈಕೆ:

ಈವರೆಗೆ ಕರ್ನಾಟಕಕ್ಕೆ ಸೇರಿದ ಅಂದಾಜು 20 ರಿಂದ 22 ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಟ್ಯಾಂಕರ್‌ ನೀರೇ ಆಪತ್ಬಾಂಧವ. ಹೀಗಾಗಿ ಇಲ್ಲಿಯ ಜನ ಮಹಾರಾಷ್ಟ್ರದಿಂದ ಬರುತ್ತಿದ್ದ ಖಾಸಗಿ ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದರು. ಒಂದು ಟ್ಯಾಂಕರ್‌ ನೀರು ಕೇವಲ .250 ಸಿಗುತ್ತಿತ್ತು. ಕಾರಣ ಮಹಾರಾಷ್ಟ್ರದಲ್ಲಿ ನೀರಿನ ಕೊರತೆ ಇಲ್ಲ. ಜಲಮೂಲಗಳಾದ ಕೆರೆ, ಕಟ್ಟೆಗಳು ಇನ್ನೂ ತುಂಬಿವೆ.

ನೀರು ಪೂರೈಸದಂತೆ ಕಟ್ಟುನಿಟ್ಟಿನ ಆದೇಶ:

ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ಗಡಿಗ್ರಾಮಗಳಲ್ಲಿ ನೀರಿನ ಹಾಹಾಕಾರ ತೀವ್ರವಾಗಿದೆ. ಮಹಾದ ಜನಪ್ರತಿನಿಧಿಗಳು ಕರ್ನಾಟಕದ ಗಡಿ ಗ್ರಾಮಗಳಿಗೆ ಯಾವುದೇ ಕಾರಣಕ್ಕೂ ನೀರು ಪೂರೈಕೆ ಮಾಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಯಾವುದೇ ಕಾರಣವಿಲ್ಲದೆ ಜನಪ್ರತಿನಿಧಿಗಳು ಆದೇಶ ನೀಡಿರುವುದರಿಂದ ಮಹಾರಾಷ್ಟ್ರ ಸರ್ಕಾರದ ಕಂದಾಯ ಹಾಗೂ ಪೊಲೀಸ್‌ ಇಲಾಖೆಯವರು ಅಥಣಿ ತಾಲೂಕಿನ ಗಡಿ ಗ್ರಾಮಗಳಿಗೆ ನೀರು ಪೂರೈಕೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ಚೆಕ್‌ಪೋಸ್ಟ್‌ನಿಂದ ಒಂದು ಟ್ಯಾಂಕರ್‌ ಕೂಡ ಹೊರಬರುತ್ತಿಲ್ಲ. ಇದರಿಂದಾಗಿ ಗಡಿ ಗ್ರಾಮದ 22ಕ್ಕೂ ಅಧಿಕ ಗ್ರಾಮಗಳ ಜನರು ನೀರಿಲ್ಲದೇ ಪರದಾಡುತ್ತಿದ್ದಾರೆ.

ಕನ್ನಡಪರ ಸಂಘಟನೆಗಳಿಂದ ಆಕ್ರೋಶ:

ಮಹಾದಿಂದ ರಾಜ್ಯದ ಗಡಿಗ್ರಾಮಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿರುವ ನಿಲುವನ್ನು ನಾನಾ ಕನ್ನಡ ಪರ ಸಂಘಟನೆಗಳು ಖಂಡಿಸಿವೆ. ಇದೊಂದು ಅಮಾನವೀಯ ಕಾರ್ಯವಾಗಿದ್ದು, ಕರ್ನಾಟಕ ಸರ್ಕಾರ ಈ ಕೂಡಲೇ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಗಡಿ ಗ್ರಾಮದ ಜನರಿಗೆ ನೀರೊದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ರಾಜ್ಯದ ಗಡಿಗ್ರಾಮಗಳಿಗೆ ನೀರು ಪೂರೈಕೆ ತಡೆದಿರುವ ಕ್ರಮವನ್ನು ಖಂಡಿಸುತ್ತೇವೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನಮ್ಮ ಪರಂಪರೆ. ನೀರು ಪೂರೈಕೆ ತಡೆ ಹಿಡಿದಿರುವ ಮಹಾ ಸರ್ಕಾರ ತನ್ನ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ‍್ಯವಾಗುತ್ತದೆ. ಈ ವಿಷಯವನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಗಮನಕ್ಕೆ ಶೀಘ್ರವೇ ತರುತ್ತೇವೆ.

-ಅಶೋಕ ಚಂದರಗಿ, ಕನ್ನಡ ಪರ ಹೋರಾಟಗಾರ ಬೆಳಗಾವಿ

ಮಹಾ ಸರ್ಕಾರದ ಧೋರಣೆ ಸರಿಯಲ್ಲ. ನಮ್ಮ ತಾಲೂಕಿನ ಲಕ್ಷಾಂತರ ಲೀಟರ್‌ ಹಾಲು ನೆರೆ ಮಹಾರಾಷ್ಟ್ರಕ್ಕೆ ಹೋಗುತ್ತದೆ. ಆದರೆ, ನಾವು ಯಾರು ಕ್ಯಾತೆ ತೆಗೆದಿಲ್ಲ. ನಮ್ಮ ಕಡೆ ಬರುವ ನೀರಿನ ಟ್ಯಾಂಕರ್‌ಗಳನ್ನು ಬಂದ್‌ ಮಾಡಿರುವುದು ನಿಜವಾಗಿಯೂ ಅಮಾನವೀಯ ಕೆಲಸ.

- ಜಗನ್ನಾಥ ಭಾಮನೆ, ಕರವೇ ಕಾರ್ಯದರ್ಶಿ ಅಥಣಿ

ನಮ್ಮ ಗಡಿಭಾಗದಲ್ಲಿ ನಾವೆಲ್ಲ ಅಣ್ಣ ತಮ್ಮಂದಿರಂತೆ ಇದ್ದೆವು. ನಾವು ಕನ್ನಡಿಗರು ಅವರು ಮಹಾರಾಷ್ಟ್ರದವರು ಎಂಬ ಯಾವುದೇ ಭೇದಭಾವವಿಲ್ಲ. ನಮಗೆ ನೀರಿನ ಸಮಸ್ಯೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ಮಾನವೀಯತೆ ತೋರಿಸಬೇಕಾಗಿತ್ತು. ಅವರು ಮನುಷ್ಯರೆ, ನಾವೂ ಮನುಷ್ಯರೆ. ಕೆಲವು ಸಮಯದಲ್ಲಿ ರಾಜಕಾರಣ, ದ್ವೇಷ ಮರೆಯಬೇಕಾಗುತ್ತದೆ. ಇನ್ನಾದರೂ ಅವರು ತಿಳಿದುಕೊಂಡು ಮಾನವೀಯತೆ ಮೆರೆಯಲಿ.

-ಸೋಮಲಿಂಗ ಕರಣಿ, ಅನಂತಪುರ ಗ್ರಾಮ ನಿವಾಸಿ

ವರದಿ :  ಸಿ.ಎ.ಇಟ್ನಾಳಮಠ

Follow Us:
Download App:
  • android
  • ios