ಗೋಧ್ರಾ ಶೂಟಿಂಗ್ ವೇಳೆ ಬೋಗಿಗೆ ಬೆಂಕಿ ಹಚ್ಚಿಲ್ಲ: ರೈಲ್ವೆ ಸ್ಪಷ್ಟನೆ
002ರ ಗೋಧ್ರಾ ರೈಲು ದುರಂತ ಮರುಸೃಷ್ಟಿ| ಬೆಂಕಿ ಹಚ್ಚಿಲ್ಲ: ರೈಲ್ವೆ ಸ್ಪಷ್ಟನೆ
ವಡೋದರಾ[ಮಾ.05]: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಸಾಕ್ಷ್ಯ ಚಿತ್ರವೊಂದರಲ್ಲಿ 2002ರ ಗೋಧ್ರಾ ರೈಲು ದುರಂತವನ್ನು ಮರುಸೃಷ್ಟಿಸಲು ಬಳಕೆ ಆಗದ ರೈಲು ಬೋಗಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ ಎಂಬ ಮಾಧ್ಯಮ ವರದಿಯನ್ನು ರೈಲ್ವೆ ಅಧಿಕಾರಿಗಳು ಸೋಮವಾರ ನಿರಾಕರಿಸಿದ್ದಾರೆ.
ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್.6 ಬೋಗಿಗೆ 2002ರ ಫೆ.27ರಂದು ಬೆಂಕಿ ಹಚ್ಚಿದ ಘಟನೆಯನ್ನು ಪ್ರತಾಪ್‌ನಗರ್ ಮತ್ತು ವಿಶ್ವಾಮಿತ್ರಿ ನಿಲ್ದಾಣಗಳ ಮಧ್ಯೆ ಚಿತ್ರೀಕರಿಸಲು ನಾಲ್ಕು ದಿನಗಳ ಅನುಮತಿ ನೀಡಲಾಗಿತ್ತು. ‘ಅಣಕು ಪ್ರದರ್ಶನ ಬೋಗಿ’ಯನ್ನು ಚಿತ್ರೀಕರಣದ ಬಳಿಕ ಅದೇ ಸ್ಥಿತಿಯಲ್ಲಿ ಮರಳಿಸಬೇಕು ಎಂದು ಸಾಕ್ಷ್ಯ ಚಿತ್ರ ತಂಡಕ್ಕೆ ಸೂಚನೆ ನೀಡಿದ ಹೊರತಾಗಿಯೂ ಬೋಗಿಗೆ ಬೆಂಕಿ ಹಚ್ಚಲಾಗಿದೆ ಮಾಧ್ಯಮದಲ್ಲಿ ವರದಿಯಾಗಿತ್ತು. ಆದರೆ, ಚಿತ್ರೀಕರಣ ಮೇಲ್ವಿಚಾರಣೆ ನಡೆಸಿದ್ದ ಅಧಿಕಾರಿಗಳು ಬೋಗಿಗೆ ಬೆಂಕಿ ಹಚ್ಚಿರುವುದನ್ನು ನಿರಾಕರಿಸಿದ್ದಾರೆ.
ರೈಲಿಗೆ ಹೊರಗಿನಿಂದ ಬೆಂಕಿ ಹಾಕಿದ ದೃಶ್ಯವನ್ನು ಚಿತ್ರೀಕರಿಸಲು ಬೋಗಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ದೃಶ್ಯ ಕೇವಲ 20 ಸೆಕೆಂಡ್‌ಗಳದ್ದಾಗಿದ್ದು, ಬೋಗಿಗೆ ಬೆಂಕಿ ಹಚ್ಚಲಾಗಿಲ್ಲ. 2002ರ ಗೋಧ್ರಾ ಘಟನೆಯನ್ನು ಮುಂಬೈನಲ್ಲಿ ನಿರ್ಮಿಸಲಾದ ಸೆಟ್‌ನಲ್ಲಿ ಚಿತ್ರೀಕರಿಸಲಾಗುವುದು ಎಂದು ಚಿತ್ರೀಕರಣದ ಮೇಲ್ವಿಚಾರಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.