Asianet Suvarna News Asianet Suvarna News

ಇಂದಿರಾ ಕ್ಯಾಂಟೀನ್ ಶೌಚಾಲಯಗಳಿಗೆ ಬೀಗ

ಬೆಂಗಳೂರಿಗರಿಗೆ ಅನುಕೂಲತೆ ಒದಗಿಸುವ ನಿಟ್ಟಿನಲ್ಲಿ ಆರಂಭ ಮಾಡಲಾದ ಇಂದಿರಾ ಕ್ಯಾಂಟೀನ್ ನಲ್ಲಿ ಇರುವ ಶೌಚಾಲಯಗಳು ಮಾತ್ರ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. 

No Toilet Facility Available In Indira Canteen
Author
Bengaluru, First Published Aug 6, 2018, 8:20 AM IST

ಬೆಂಗಳೂರು :  ಇಂದಿರಾ ಕ್ಯಾಂಟಿನ್ ಆರಂಭಗೊಂಡು ಇದೇ ಆಗಸ್ಟ್ 15ಕ್ಕೆ ಒಂದು ವರ್ಷ ತುಂಬಲಿದೆ. ಆದರೆ, ಈ ಕ್ಯಾಂಟಿನ್‌ಗೆ ಬರುವ ಸಾರ್ವಜನಿಕರಿಗೆ ನಿಸರ್ಗದ ಕರೆ ಕಾಡಿದರೆ ಬಳಸಲಿ ಎಂದು ನಿರ್ಮಿಸಿದ ಶೌಚೌಲಯಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಕ್ತಿಯನ್ನೇ ಕೊಟ್ಟಿಲ್ಲ! 

ಇಷ್ಟಕ್ಕೂ, ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಶೌಚಾಲಯಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸದೇ ಇರಲು ಪಾಲಿಕೆ ಹಾಗೂ ಕ್ಯಾಂಟೀನ್ ಸಿಬ್ಬಂದಿ ನೀಡುತ್ತಿರುವ ಕಾರಣ ಭಾರಿ ಕುತೂಹಲಕಾರಿಯಾಗಿವೆ. 1- ಶೌಚಾಲಯಗಳನ್ನು ಬಳಸಲು ಅವಕಾಶ ನೀಡಿದರೆ ಅದರಲ್ಲಿನ ‘ಬೆಲೆಬಾಳುವ’ (ಕ್ಯಾಂಟೀನ್ ನಿಂದ ಚಮಚಗಳನ್ನು ಕದಿಯುವ ಜನರಿದ್ದಾರೆ. ಈ ಅರ್ಥದಲ್ಲಿ ಶೌಚಾಲಯದ ಸಲಕರಣೆಗಳನ್ನು ಬೆಲೆಬಾಳುವ ಉಪಕರಣಗಳು ಎಂಬುದು ಸಿಬ್ಬಂದಿಯ ವ್ಯಾಖ್ಯಾನ!) ಉಪಕರಣಗಳು ಕಳುವಾಗಬಹುದು! 

ಶೌಚಾಲಯ ಸ್ವಚ್ಛ ಮಾಡುವುದಕ್ಕೆ ಪ್ರತ್ಯೇಕ ಸಿಬ್ಬಂದಿ ಒದಗಿಸಲಾಗಿಲ್ಲ.  ಶೌಚಾಲಯಕ್ಕೆ ಹಾಕಿದ ಬೀಗದ ಕೀಲಿಕೈ ಕಳೆದು ಹೋಗಿದೆ!!!: ಆದರೆ, ಈ ಕುಂಟುನೆಪಗಳಿಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಶೌಚಾಲಯದ ಸಲಕರಣೆಗಳು ಕಳುವಾಗುತ್ತವೆ ಎಂಬ ಭೀತಿಯಿದ್ದರೆ ಅದನ್ನು ನಿರ್ಮಾಣ ಮಾಡಿದ್ದಾದರೂ ಏಕೆ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಬಿಬಿಎಂಪಿ ಮುಂದಿಡುತ್ತಿದ್ದಾರೆ. 

ಇಡೀ ಬೆಂಗಳೂರು ಸ್ವಚ್ಛ ಮಾಡುವ ಬಿಬಿಎಂಪಿಗೆ ಮಹಾತ್ವಕಾಂಕ್ಷಿ, ಬಡವರಿಗೆ, ನಿರ್ಗತಿಕರಿಗೆ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್‌ನ ಶೌಚಾಲಯಗಳನ್ನು ಸ್ವಚ್ಛ ಮಾಡುವುದಕ್ಕೆ ಜನರಿಲ್ಲವಾ ಅಥವಾ ಸಿಬ್ಬಂದಿಗೆ ನೀಡುವುದಕ್ಕೆ ಹಣ ಇಲ್ಲವಾ ಎಂಬುದು ಇಂದಿರಾ ಕ್ಯಾಂಟೀನ್‌ಗೆ ಆಗಮಿಸುವ ಜನಸಾಮಾನ್ಯರ ಪ್ರಶ್ನೆಯಾಗಿದೆ. 

ಕ್ಯಾಂಟೀನ್ ಸಿಬ್ಬಂದಿಯೇ ಶೌಚಾಲಯದ ಬಾಗಿಲು ತೆಗೆಯುವುದಕ್ಕೆ ಅಡ್ಡಿಪಡಿಸುತ್ತಿದ್ದು, ಕಾರಣ ಸಿಬ್ಬಂದಿಗೆ ಕ್ಯಾಂಟೀನ್‌ಗಳಲ್ಲಿರುವ  ಉಪಕರಣಗಳು ಕಳೆದು ಹೋದರೆ ಅಥವಾ ಕಳ್ಳತವಾದರೆ ಆ ಹಣವನ್ನು ನಿಮ್ಮ ವೇತನದಲ್ಲಿ ಕಡಿತಗೊಳಿಸಲಾಗುವುದು ಎಂದು ಗುತ್ತಿಗೆದಾರರು ಮೌಖಿಕವಾಗಿ ಎಚ್ಚರಿಕೆ ನೀಡಿದ್ದರು. 

ಇದನ್ನು ಶೌಚಾಲಯಕ್ಕೂ ಅನ್ವಯ ಮಾಡಿಕೊಂಡಿರುವ ಕ್ಯಾಂಟೀನ್ ಸಿಬ್ಬಂದಿ ವೇತನ ಕಡಿತದ ಭೀತಿಯಿಂದ ಶೌಚಾಲಯ ತೆರೆಯಲು ಮುಂದಾಗುತ್ತಿಲ್ಲ ಎನ್ನಲಾಗಿದೆ. ಇನ್ನು ಕೆಲವು ಕ್ಯಾಂಟೀನ್‌ಗಳಲ್ಲಿ ಶೌಚಾಲಯಗಳು ಸಿಬ್ಬಂದಿ ಬಳಕೆಗೆ ಮಾತ್ರ ಸೀಮಿತವಾಗಿವೆ. ನಾಗರಿಕರಿಗೆ ಅನುಕೂಲವಾಗಿಸುವ ಉದ್ದೇಶದಿಂದ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಆಗಿನ ಬಿಬಿಎಂಪಿ ಮೇಯರ್ ಪದ್ಮಾವತಿ ಅವರು ಸ್ಪಷ್ಟಪಡಿಸಿದ್ದರು. ಆದರೆ, ಕ್ಯಾಂಟೀನ್ ಸಿಬ್ಬಂದಿ ಮಾತ್ರ ಶೌಚಾಲಯಗಳು ಇರುವುದು ಸಿಬ್ಬಂದಿಗೆ ಮಾತ್ರ ಸಾರ್ವಜನಿಕರ ಬಳಕೆಗಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

 ಹೆಚ್ಚಿನ ಜನರಿಗೆ ಅನುಕೂಲವಾಗಲೆಂದು ಜನದಟ್ಟಣೆ ಹೆಚ್ಚಿರುವ ಪ್ರದೇಶಗಳನ್ನೇ ಗುರುತಿಸಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸಿ ನೀರು, ವಿದ್ಯುತ್, ಭದ್ರತೆ ಸೇರಿದಂತೆ ಸಮರ್ಪಕ ಮೂಲಸೌಕರ್ಯ ಒದಗಿಸಲಾಗಿದೆ. ನಗರದಲ್ಲಿ 171 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಿರ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಒಟ್ಟು 342  ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಶೌಚಾಲಯಗಳನ್ನು ಇಂದಿರಾ ಕ್ಯಾಂಟೀನ್ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಬಾಗಿಲು ತೆಗೆದಿದ್ದು ಬಿಟ್ಟರೇ ಮತ್ತೆ ಅನಂತರ ತೆಗೆದೆ ಇಲ್ಲ.

ವಿಶ್ವನಾಥ ಮಲೆಬೆನ್ನೂರು

Follow Us:
Download App:
  • android
  • ios