Asianet Suvarna News Asianet Suvarna News

ಅರಣ್ಯ ಸಿಬ್ಬಂದಿಗೆ ಪದಕ ಕೊಡಲು ಸಿಎಂಗೆ ಬಿಡುವಿಲ್ಲ

ಅರಣ್ಯ ಸಂರಕ್ಷಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ 25 ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ‘ಮುಖ್ಯ​ಮಂತ್ರಿ​ಯ​ವರ ಪದಕ’ ನೀಡಲು ಅರಣ್ಯ ಇಲಾಖೆ ಸಕಲ ಸಿದ್ಧತೆ ಪೂರ್ಣ​ಗೊ​ಳಿಸಿ ಒಂದು ತಿಂಗ​ಳಾ​ಗಿದೆ. ಆದರೆ, ಪ್ರಶಸ್ತಿ ಪ್ರದಾನ ಮಾಡ​ಬೇ​ಕಾದ ಮುಖ್ಯ​ಮಂತ್ರಿ​ಯ​ವರ ಸಮಯ ನಿಗ​ದಿ​ಯಾ​ಗದೇ ವಿಜೇ​ತ​ರಿಗೆ ಪ್ರಶಸ್ತಿ ಇನ್ನೂ ಮರೀ​ಚಿ​ಕೆ​ಯಾ​ಗಿ​ದೆ!
 

No Time For CM To Distribute Mukhyamantri padaka For Forest Department Employees
Author
Bengaluru, First Published Oct 31, 2018, 8:23 AM IST

ಬೆಂಗಳೂರು :  ಅರಣ್ಯ ಸಂರಕ್ಷಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ 25 ಸಿಬ್ಬಂದಿಗೆ ಇದೇ ಮೊದಲ ಬಾರಿಗೆ ‘ಮುಖ್ಯ​ಮಂತ್ರಿ​ಯ​ವರ ಪದಕ’ ನೀಡಲು ಅರಣ್ಯ ಇಲಾಖೆ ಸಕಲ ಸಿದ್ಧತೆ ಪೂರ್ಣ​ಗೊ​ಳಿಸಿ ಒಂದು ತಿಂಗ​ಳಾ​ಗಿದೆ. ಆದರೆ, ಪ್ರಶಸ್ತಿ ಪ್ರದಾನ ಮಾಡ​ಬೇ​ಕಾದ ಮುಖ್ಯ​ಮಂತ್ರಿ​ಯ​ವರ ಸಮಯ ನಿಗ​ದಿ​ಯಾ​ಗದೇ ವಿಜೇ​ತ​ರಿಗೆ ಪ್ರಶಸ್ತಿ ಇನ್ನೂ ಮರೀ​ಚಿ​ಕೆ​ಯಾ​ಗಿ​ದೆ!

ಪೊಲೀಸ್‌ ಇಲಾಖೆ ಮಾದ​ರಿ​ಯಲ್ಲಿ ಅರಣ್ಯ ಇಲಾ​ಖೆ​ಯಲ್ಲೂ ವಿಶೇಷ ಸೇವೆ ಸಲ್ಲಿಸಿದವರಿಗೆ ಮುಖ್ಯ​ಮಂತ್ರಿ​ಯ​ವರ ಹೆಸ​ರಿ​ನಲ್ಲಿ ಪದಕ ನೀಡಲು ಇಲಾಖೆ ಮುಂದಾ​ಗಿದ್ದು, ಇದಕ್ಕೆ ಎಲ್ಲಾ ಅಗತ್ಯ ಸಿದ್ಧ​ತೆ​ಗ​ಳನ್ನು ಒಂದು ತಿಂಗಳ ಹಿಂದೆಯೇ ಪೂರೈ​ಸಿದೆ. ಅನಂತರ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರ ಸಮ​ಯ​ಕ್ಕಾಗಿ ಕಾಯು​ತ್ತಲೇ ಇದೆ. ಉಪ ಚುನಾ​ವಣೆ ನಂತ​ರ​ವಾ​ದರೂ ಈ ಸಮಯ ಭಾಗ್ಯ ದೊರೆ​ಯ​ಬ​ಹುದು ಎಂಬ ನಿರೀ​ಕ್ಷೆ​ಯನ್ನು ಇಲಾಖೆ ಹೊಂದಿ​ದೆ.

ಅರಣ್ಯ ಸಂರಕ್ಷಣೆ, ಸಂಶೋಧನೆ ಹಾಗೂ ತರಬೇತಿ ಸೇರಿ​ದಂತೆ ವಿವಿಧ ವಿಭಾಗಗಳಲ್ಲಿ ಅತ್ಯು​ತ್ತಮ ಸೇವೆ ಸಲ್ಲಿ​ಸಿ​ರು​ವ 25 ಮಂದಿ​ಯನ್ನು ಮುಖ್ಯ​ಮಂತ್ರಿಯವರ ಪದ​ಕ​ಕ್ಕಾಗಿ ಆಯ್ಕೆ ಮಾಡ​ಲಾ​ಗಿದೆ. ಈ ಪ್ರಶ​ಸ್ತಿ​ಗಾಗಿ ವೃತ್ತ, ವಲಯ ಹಾಗೂ ರಾಜ್ಯಮಟ್ಟದಲ್ಲಿ ಆಯ್ಕೆ ಸಮಿತಿಗಳ ಮೂಲಕ ನೂರಾರು ಮಂದಿ ಅರ್ಹ​ರನ್ನು ಪರಿ​ಗ​ಣಿಸಿ ಪರಿ​ಶೋ​ಧಿ​ಸಿದ ನಂತರ 25 ಮಂದಿ​ಯ ಪಟ್ಟಿಸಿದ್ಧ​ಪ​ಡಿ​ಸ​ಲಾ​ಗಿ​ದೆ.

ಪ್ರಸ್ತುತ 2017ನೇ ಸಾಲಿನ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮುಂದಿನ ವರ್ಷದ ಪಟ್ಟಿಸಿದ್ಧತೆ ಮಾಡುವುದಕ್ಕಾಗಿ ಶೀಘ್ರದಲ್ಲಿ ನೋಟಿಫಿಕೇಷನ್‌ ಹೊರಡಿಸಲು ತಯಾರಿ ನಡೆಯುತ್ತಿದೆ. ಆದರೆ, ಮೊದಲ ಸಾಲಿನ ಪ್ರಶಸ್ತಿ ವಿತರಣೆ ಮಾಡಿದರೆ, ಮುಂದಿನ ಸಾಲಿಗೆ ಸಿದ್ಧತೆ ನಡೆಸಬಹುದಾಗಿದೆ. 2017ನೇ ಸಾಲಿನ ಪದಕ ಮತ್ತು ಪ್ರಶಸ್ತಿ ಪ್ರದಾನಕ್ಕೆ ಕಾಲ ಕೂಡಿ ಬರದ ಹಿನ್ನೆಲೆಯಲ್ಲಿ 2018ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯೂ ವಿಳಂಬ​ವಾ​ಗು​ತ್ತಿ​ದೆ.

ಮೂರು ವರ್ಷ ಸೇವೆ ಪರಿಗಣನೆ:

ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮೂರು ವರ್ಷಗಳ ಸೇವಾ ಅನುಭವವನ್ನು ರಾಜ್ಯದ ಎಲ್ಲ ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೆ, ಈ ಪಟ್ಟಿಯಲ್ಲಿ ಇಲಾಖಾ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆದು ಅಂತಿಮವಾಗಿ 25 ಜನರ ಪಟ್ಟಿಸಿದ್ಧಪಡಿಸಿದ್ದು ಸರ್ಕಾರಕ್ಕೆ ರವಾನಿಸಲಾಗಿದೆ. ಶೀಘ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಸಿದ್ಧತೆ ಮಾಡಿ​ಕೊ​ಳ್ಳ​ಲಾ​ಗಿದೆ. ಮುಖ್ಯಮಂತ್ರಿಗಳ ದಿನಾಂಕ ನಿಗದಿಯಾದ ತಕ್ಷಣ ಕಾರ್ಯಕ್ರಮ ಮಾಡಿ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಹೆಸ​ರೇ​ಳ​ಲಿ​ಚ್ಛಿ​ಸದ ಇಲಾ​ಖೆಯ ಉನ್ನತ ಅಧಿ​ಕಾ​ರಿ​ಯೊ​ಬ್ಬರು ಕನ್ನ​ಡ​ಪ್ರ​ಭಕ್ಕೆ ತಿಳಿ​ಸಿ​ದ​ರು.

Follow Us:
Download App:
  • android
  • ios