ಕರ್ನಾಟಕದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ಕೈ ನಾಯಕರಿಬ್ಬರ ನಡುವೆ ಮುನಿಸು ಕಂಡು ಬಂದಿದೆ. 

ಕುಂದಗೋಳ: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣಾ ಸಮರಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಖಂಡರು ಶುಕ್ರವಾರ ಸಂಜೆ ಶಕ್ತಿ ಪ್ರದರ್ಶನದ ಮೂಲಕ ರಣಕಹಳೆ ಮೊಳಗಿಸಿದರು. ತಾಲೂಕಿನ ಸಂಶಿಯಲ್ಲಿ ಕಿಕ್ಕಿರಿದು ತುಂಬಿದ್ದ ಸಮಾವೇಶದಲ್ಲಿ ಮಾತನಾಡಿದ ಮುಖಂಡರೆಲ್ಲರೂ, ಶಿವಳ್ಳಿ ಆತ್ಮಕ್ಕೆ ಗೌರವ ಸಲ್ಲಿಸಬೇಕೆಂದರೆ ಶಿವಳ್ಳಿ ಪತ್ನಿಗೆ ಮತ ಚಲಾಯಿಸಬೇಕು. 

ಶಿವಳ್ಳಿ ಸ್ಥಾನವನ್ನು ಅವರ ಪತ್ನಿ ಕುಸುಮಾವತಿ ತುಂಬ ಬೇಕೆಂಬುದು ಕಾಂಗ್ರೆಸ್ ಅಭಿಪ್ರಾಯ. ಈ ನಿಟ್ಟಿನಲ್ಲಿ ತಾವೆಲ್ಲರೂ ಪಣತೊಟ್ಟು ಕೆಲಸ ಮಾಡಬೇಕೆಂದು ಕರೆ ನೀಡಿದರು.

ತಾಲೂಕಿನ ಸಂಶಿ ಗ್ರಾಮದಲ್ಲಿ ಶುಕ್ರವಾರ ಕುಂದಗೋಳ ಉಪಚುನಾವಣೆಯ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ವೇದಿಕೆ ಹಂಚಿಕೊಂಡಿದ್ದರೂ ಅಂತರ ಕಾಯ್ದುಕೊಂಡದ್ದು ಗಮನ ಸೆಳೆಯಿತು.