ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ  ‘ದಿ ವಿಲನ್‌’ ಚಿತ್ರಕ್ಕೆ ಮತ್ತೊಂದು ಹೊಸ ವಿವಾದ ಸುತ್ತಿಕೊಂಡಿದೆ. ದಿ ವಿಲನ್‌’ ಚಿತ್ರವನ್ನು ಸಮರ್ಥಿಸುವ ಭರದಲ್ಲಿ ‘ಪ್ರೇಮಲೋಕ’, ‘ಟಗರು’ ಚಿತ್ರಗಳಲ್ಲೂ ಕತೆಯೇ ಇಲ್ಲ ಎಂದು ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಹಾಕಿದ್ದಾರೆನ್ನಲಾದ ಫೇಸ್‌ಬುಕ್‌ ಸ್ಟೇಟಸ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ. 

ಬೆಂಗಳೂರು : ಶಿವಣ್ಣ ಹಾಗೂ ಸುದೀಪ್‌ ಕಾಂಬಿನೇಷನ್‌ನ ‘ದಿ ವಿಲನ್‌’ ಚಿತ್ರಕ್ಕೆ ಮತ್ತೊಂದು ವಿವಾದ ಸುತ್ತಿಕೊಂಡಿದೆ. ‘ದಿ ವಿಲನ್‌’ ಚಿತ್ರವನ್ನು ಸಮರ್ಥಿಸುವ ಭರದಲ್ಲಿ ‘ಪ್ರೇಮಲೋಕ’, ‘ಟಗರು’ ಚಿತ್ರಗಳಲ್ಲೂ ಕತೆಯೇ ಇಲ್ಲ ಎಂದು ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಹಾಕಿದ್ದಾರೆನ್ನಲಾದ ಫೇಸ್‌ಬುಕ್‌ ಸ್ಟೇಟಸ್‌ಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇಷ್ಟೆಲ್ಲ ವಿವಾದ ಆಗುತ್ತಿದ್ದಂತೆ ರಕ್ಷಿತಾ ಅವರ ಸ್ಟೇಟಸ್‌ ಮಾಯವಾಗಿದೆ.

ಪ್ರೇಮ್‌ ನಿರ್ದೇಶಿಸಿ, ಸಿ.ಆರ್‌. ಮನೋಹರ್‌ ನಿರ್ಮಿಸಿರುವ ‘ದಿ ವಿಲನ್‌’ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ‘ಚಿತ್ರದ ಕತೆಯೇ ಇಲ್ಲ, ಕತೆ ಇಲ್ಲದೆ ಗಿಮಿಕ್‌ ಪ್ರಚಾರಗಳಿಂದ ಚಿತ್ರಕ್ಕೆ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ’ ಎಂಬುದು ಬಹುತೇಕರ ಆರೋಪ.

ಸೋಷಿಯಲ್‌ ಮೀಡಿಯಾಗಳಲ್ಲಿ ಹೀಗೆ ಚಿತ್ರದ ಕುರಿತು ಮಾತನಾಡುತ್ತಿರುವವರಿಗೆ ತಿರುಗೇಟು ನೀಡಲು ರಕ್ಷಿತಾ ಪ್ರೇಮ್‌ ಅವರು ಸ್ಟೇಟಸ್‌ ಹಾಕಿದ್ದು, ಅದರಲ್ಲಿ ‘ಪ್ರೇಮ್‌ ತಮ್ಮ ಚಿತ್ರಕ್ಕೆ ಪಬ್ಲಿಸಿಟಿ ಮಾಡಿಸೋದು ಜನಕ್ಕೆ ತಲುಪಲಿ ಅಂತ. ಹೈಪ್‌ ಕ್ರಿಯೇಟ್‌ ಮಾಡೋದು ಒಂದು ಚಿತ್ರದ ವ್ಯಾಪಾರಕ್ಕೆ ಸಂಬಂಧಪಟ್ಟವಿಚಾರ. ಇನ್ನೂ ಕತೆ ಇಲ್ಲದೆ ಮೇಕಿಂಗ್‌ ಸಿನಿಮಾ ಮಾಡೋದು ಪ್ರೇಮ್‌ ಪ್ರತಿಭೆ ಮತ್ತು ತಾಕತ್ತು. ಹಳೆಯ ಪ್ರೇಮಲೋಕ ಹಾಗೂ ಇತ್ತೀಚಿನ ಟಗರು ಚಿತ್ರಗಳಲ್ಲಿ ಕತೆಯೇ ಇರಲಿಲ್ಲ. ಆದರೂ ಜನ ನೋಡಿಲ್ಲವೇ? ಪ್ರೇಮಲೋಕ 25 ವಾರ ಯಶಸ್ವಿಯಾಗಿ ಓಡಲಿಲ್ಲವೇ? ಕತೆಯಿಲ್ಲದೆ ಓಡಿರುವ ನೂರಾರು ಸಿನಿಮಾಗಳ ಉದಾಹರಣೆ ಇಲ್ವಾ’ ಎಂದಿದ್ದಾರೆ.

ರಘುರಾಮ್‌ ತಿರುಗೇಟು:

ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ರಘುರಾಮ್‌, ‘ಇತಿಹಾಸ ಸೃಷ್ಟಿಸಿದ ಪ್ರೇಮಲೋಕ ಸಿನಿಮಾ ಮತ್ತು ರವಿಚಂದ್ರನ್‌ ಸಾರ್‌ ಬಗ್ಗೆ ಮಾತನಾಡುವ ಮೊದಲು ಯೋಗ್ಯತೆ ಇರಬೇಕು. ಟಗರು 25 ವಾರ ಓಡಿ, ಹಲವಾರು ದಾಖಲೆ ಸೃಷ್ಟಿಸಿದ ಸಿನಿಮಾ. ಇಂಥ ಸಿನಿಮಾಗಳ ಬಗ್ಗೆ ಯೋಚಿಸಿ ಮಾತನಾಡಬೇಕು. ಒಂದು ಚಿತ್ರಕ್ಕೆ ಕತೆಯ ಜೊತೆಗೆ ಚಿತ್ರಕತೆ, ಸಂಗೀತ ಎಷ್ಟುಮುಖ್ಯ ಅಂತ ತೋರಿಸಿಕೊಟ್ಟ ಸಿನಿಮಾಗಳವು’ ಎಂದಿದ್ದಾರೆ. ಶಿವಣ್ಣ ಅಭಿಮಾನಿಗಳು ಕೂಡ ಗರಂ ಆಗಿದ್ದು, ‘ನಿಮ್ಮ ಮನೆಯವರ ಚಿತ್ರವನ್ನು ಸಮರ್ಥಿಸಿಕೊಳ್ಳುವುದಕ್ಕೆ ನಮ್ಮ ಹೀರೋ ಚಿತ್ರವನ್ನು ಯಾಕೆ ಎಳೆದು ತರುತ್ತೀರಿ’ ಎಂದು ಕಿಡಿಕಾರಿದ್ದಾರೆ.