ಕರ್ನಾಟಕದಲ್ಲಿ 15 ವರ್ಷ ಸಮ್ಮಿಶ್ರ ಸರ್ಕಾರದ ಆಡಳಿತದ ಆಸೆ

First Published 17, Jun 2018, 8:44 AM IST
No Problem In Congress - JDS Alliance govt
Highlights

ಮಹಾರಾಷ್ಟ್ರದಲ್ಲಿ ಈ ಹಿಂದೆ ಕಾಂಗ್ರೆಸ್‌-ಎನ್‌ಸಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ 15 ವರ್ಷ ಆಡಳಿತ ನಡೆಸಿದ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಆಡಳಿತ ನಡೆಸುವ ಬಯಕೆ ಇದೆಯಾದರೂ ಮಾಧ್ಯಮಗಳು ಇಲ್ಲದ ಗೊಂದಲ ಸೃಷ್ಟಿಸುತ್ತಿವೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
 

ಬೆಂಗಳೂರು :  ಮಹಾರಾಷ್ಟ್ರದಲ್ಲಿ ಈ ಹಿಂದೆ ಕಾಂಗ್ರೆಸ್‌-ಎನ್‌ಸಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ 15 ವರ್ಷ ಆಡಳಿತ ನಡೆಸಿದ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಆಡಳಿತ ನಡೆಸುವ ಬಯಕೆ ಇದೆಯಾದರೂ ಮಾಧ್ಯಮಗಳು ಇಲ್ಲದ ಗೊಂದಲ ಸೃಷ್ಟಿಸುತ್ತಿವೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಭಾನುವಾರ ನಡೆಯುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಶನಿವಾರ ದೆಹಲಿಗೆ ತೆರಳಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿನ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾಧ್ಯಮಗಳು ಇನ್ನಿಲ್ಲದ ವರದಿಗಳನ್ನು ಬಿತ್ತರಿಸುತ್ತಿವೆ. ಸಚಿವ ಸಂಪುಟದಲ್ಲಿ ಸ್ಥಾನಮಾನ ಸರಿಯಾಗಿ ಸಿಗದ ಕಾರಣ ಗುಂಪುಗಳಾಗಿದ್ದು, ಸರ್ಕಾರ ಉಳಿಯುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಒಂದು ವರ್ಷ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ, ಒಂದು ವರ್ಷವಾದರೂ ಕೆಲಸ ಮಾಡಲು ಬಿಡಿ ಎಂದು ಹೇಳಿದ್ದೇನೆಯೇ ಹೊರತು ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌-ಎನ್‌ಸಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು 15 ವರ್ಷ ಆಡಳಿತ ನಡೆಸಿತು. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಆಡಳಿತ ನಡೆಸುವ ಬಯಕೆ ಇದೆ. ಕಾಂಗ್ರೆಸ್‌ ಸಹ ಅದೇ ಮನಸ್ಥಿತಿಯಲ್ಲಿದೆ. ಆದರೆ, ಮಾಧ್ಯಮಗಳು ಇಲ್ಲದ ವರದಿಗಳನ್ನು ಬಿತ್ತರಿಸಿ ಗೊಂದಲ ಸೃಷ್ಟಿಸುತ್ತಿವೆ. ಮಾಧ್ಯಮಗಳ ವರದಿಯಿಂದ ಬೇಸರವಾಗಿದ್ದು, ಅನಿವಾರ್ಯವಾಗಿ ಅಂತಹ ಹೇಳಿಕೆ ನೀಡಬೇಕಾಯಿತು. ಲೋಕಸಭೆ ಚುನಾವಣೆ ಮುಗಿಯುವರೆಗೆ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಅಲ್ಲದೇ, ಮುಂದಿನ 5 ವರ್ಷವೂ ಸಹ ಸರ್ಕಾರ ಸುಭದ್ರವಾಗಿರಲಿದೆ ಎಂದರು.

ರಾಷ್ಟ್ರೀಯ ಪಕ್ಷಗಳ ಜತೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಕುಮಾರಸ್ವಾಮಿ, ಮಾಧ್ಯಮಗಳಿಗೆ ನಾವು ಹಾಗೆ ಕಾಣಿಸುತ್ತಿದ್ದೇವೆಯೇ ಹೊರತು ವಾಸ್ತವವಾಗಿ ಅದು ಸತ್ಯವಲ್ಲ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಮುಕ್ತವಾಗಿ ಕೆಲಸ ನಡೆಯುತ್ತಿದೆ. ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಸಹಕಾರ ನೀಡಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

ಸಮ್ಮಿಶ್ರ ಸರ್ಕಾರವು ಸುಗಮವಾಗಿ ನಡೆಯಲು ಉನ್ನತ ಸಮಿತಿ ಸಭೆ ನಡೆಸುತ್ತಿದೆ. 10 ದಿನದಲ್ಲಿ ಎರಡೂ ಪಕ್ಷಗಳ ಸಾಮಾನ್ಯ ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚಿಸಿ ತಿಳಿಸುವಂತೆ ಸೂಚನೆ ನೀಡಲಾಗಿದೆ. ಸಮಿತಿ ನೀಡುವ ಕಾರ್ಯಕ್ರಮಗಳನ್ನು ಅವಲೋಕಿಸಿ ಅವುಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದರು.

 

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಮುಂದಿನ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಕುರಿತು ಕೇಳಿರುವ ಪ್ರಶ್ನೆಯೇ ಅಪ್ರಸ್ತುತ. ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕವಷ್ಟೇ ಯಾರು ಪ್ರಧಾನಿ ಎಂಬುದು ಚರ್ಚೆಯಾಗಲಿದೆ. ಕಾಂಗ್ರೆಸ್‌ ಜತೆಗೂಡಿ ತೃತೀಯ ರಂಗ ಬಹುಮತ ಪಡೆಯುವ ನಿಟ್ಟಿನಲ್ಲಿ ಶ್ರಮ ಹಾಕಿ ಕೆಲಸ ಮಾಡಬೇಕಿದೆ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

loader