ಹಗರಣದಲ್ಲಿ ನೇರವಾಗಿ ಶಾಮೀಲಾಗಿರದ ಹೊರತು ಮಾಧ್ಯಮಗಳ ವಿರುದ್ಧ ನಾವು ತನಿಖೆಯನ್ನು ಆದೇಶಿಸುವಂತಿಲ್ಲ, ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ.
ನವದೆಹಲಿ (ಮಾ.10): ಅಗಸ್ಟಾ ವೆಸ್ಟ್’ಲ್ಯಾಂಡ್ ಹಗರಣಕ್ಕೆ ಸಂಬಂಧಪಟ್ಟಂತೆ ಪತ್ರಕರ್ತರ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅಗಸ್ಟಾ ವೆಸ್ಟ್’ಲ್ಯಾಂಡ್ ಒಪ್ಪಂದದ ಬಗ್ಗೆ ಋಣಾತ್ಮಕ ವರದಿಗಳನ್ನು ಪ್ರಕಟಿಸದಂತೆ ಪತ್ರಕರ್ತರಿಗೆ ಲಂಚ ನೀಡಲಾಗಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಯಬೇಕೆಂದು ಹಿರಿಯ ಪತ್ರಕರ್ತ ಹರಿ ಜೈಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಹಗರಣದಲ್ಲಿ ನೇರವಾಗಿ ಶಾಮೀಲಾಗಿರದ ಹೊರತು ಮಾಧ್ಯಮಗಳ ವಿರುದ್ಧ ನಾವು ತನಿಖೆಯನ್ನು ಆದೇಶಿಸುವಂತಿಲ್ಲ, ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ.
ತನಿಖೆಗೆ ಆದೇಶಿಸುವುದರಿಂದ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಂತಾಗುವುದಲ್ಲದೇ ಮಾಧ್ಯಮದ ಮೇಲೆ ನಡೆಸುವ ದಾಳಿಯಾಗಿದೆಯೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಗರಣದಲ್ಲಿ ಪತ್ರಕರ್ತರು ನೇರವಾಗಿ ಭಾಗಿಯಾಗಿರುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಸಾಕ್ಷ್ಯಾಧಾರ ಲಭಿಸಿದ್ದಲ್ಲಿ ಅವರ ವಿರುದ್ಧ ತನಿಖೆ ನಡೆಸಬಹುದೆಂದು ಸುಪ್ರೀಂ ಕೋರ್ಟ್ ಹೇಳಿದೆ.
