ಶಿವಮೊಗ್ಗ[ಅ.01]: ನನ್ನ ಹಾಗೂ ಬಿ.ಎಸ್‌. ಯಡಿಯೂರಪ್ಪರನ್ನು ಪರಸ್ಪರ ದೂರ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಈ ಸಂಬಂಧ ಪ್ರಕಟವಾದ ವರದಿಗಳೆಲ್ಲವೂ ಸತ್ಯಕ್ಕೆ ದೂರ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ. ಎಸ್‌. ಈಶ್ವರಪ್ಪ ಹೇಳಿದರು.

ನಗರದ ಡಿಎಆರ್‌ ಮೈದಾನದಲ್ಲಿ ಸೋಮವಾರ ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿರುವುದನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಂತಿಯ ಮೇಲೆ ನಡೆಯುತ್ತಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ. ಯಡಿಯೂರಪ್ಪ ಅವರು ಯಾವುದೇ ಕಾರಣಕ್ಕೂ ಮನನೊಂದುಕೊಳ್ಳುವ ಅವಶ್ಯಕತೆ ಇಲ್ಲ. ರಾಜ್ಯದ ಜನತೆ ಹಾಗೂ ಪಕ್ಷದ ಶಾಸಕರು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಭರವಸೆ ನೀಡಿದರು.

ತಮ್ಮ ಭಾಷಣದಲ್ಲಿ ಮಾಧ್ಯಮದವರ ಮೇಲೆ ಹರಿಹಾಯ್ದ ಈಶ್ವರಪ್ಪ, ತಾವು ಮಾಧ್ಯಮಕ್ಕೆ ನೀಡಿದ ಹೇಳಿಕೆಯನ್ನು ಬೇರೊಂದು ಅರ್ಥದಲ್ಲಿ ಬಿತ್ತರಿಸಲಾಗಿದೆ. ಕೆಲವು ಮಾಧ್ಯಮಗಳಲ್ಲಿ ಯಡಿಯೂರಪ್ಪಗೆ ಈಶ್ವರಪ್ಪ ಟಾಂಗ್‌ ಎಂದು ಸುದ್ದಿ ಪ್ರಕಟಿಸಿವೆ. ಈ ರೀತಿ ಗೊಂದಲ ಮೂಡಿಸುವ ವ್ಯಕ್ತಿಗಳ ಬಗ್ಗೆ ಹುಷಾರಾಗಿ ಇರಬೇಕು ಎಂದರು.

ಮಾಜಿ ಸಚಿವ ಯು.ಟಿ. ಖಾದರ್‌, ಆರೆಸ್ಸೆಸ್‌ ಮಾದರಿಯಲ್ಲಿ ಸಂಘಟನೆ ಹುಟ್ಟು ಹಾಕಲು ಮುಂದಾಗಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಆರ್‌ಎಸ್‌ಎಸ್‌ ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡಿದೆ. ಅದೇ ಮಾದರಿಯಲ್ಲಿ ಯು.ಟಿ. ಖಾದರ್‌ ಸಂಘಟನೆಯನ್ನು ಹುಟ್ಟು ಹಾಕಲಿ. ವ್ಯಕ್ತಿಗತವಾಗಿ ಅಥವಾ ವ್ಯಕ್ತಿಯ ಪರವಾಗಿ ಸಂಘಟನೆ ಕಟ್ಟಿದರೆ ಪ್ರಯೋಜನ ಇಲ್ಲ ಎಂದಿದ್ದೆ. ಹಿಂದೆ ಈ ರೀತಿ ಪ್ರಯತ್ನಪಟ್ಟು ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರು ವಿಫಲರಾಗಿದ್ದಾರೆ. ಕುಮಾರಸ್ವಾಮಿ ಕೂಡ ವಿಫಲರಾಗುತ್ತಾರೆ ಎಂದು ಹೇಳಿಕೆ ನೀಡಿದ್ದು ನಿಜ. ಆದರೆ ನನ್ನ ಹಾಗೂ ಯಡಿಯೂರಪ್ಪ ನಡುವೆ ಮನಃಸ್ತಾಪ ಮೂಡಿಸುವ ಸಲುವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಹೆಸರುಗಳನ್ನು ಸುದ್ದಿಯಿಂದ ಕೈಬಿಡಲಾಗಿದೆ. ಈ ರೀತಿ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಮಾಧ್ಯಮದವರು ಕೈಹಾಕಬಾರದು ಎಂದರು.

ಇನ್ನಷ್ಟುಶಾಸಕರು ಬಿಜೆಪಿಗೆ: ಸಿದ್ದರಾಮಯ್ಯ ಮಾಡಿದ ಕಾರ್ಯದಿಂದ ಬೇಸತ್ತು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಧಿಕ್ಕಾರ ಹಾಕಿ ಆ ಪಕ್ಷದ ಶಾಸಕರು ಹೊರ ಹೋದರು. ಪರಿಣಾಮ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯಗೆ ಇದುವರೆಗೂ ವಿರೋಧ ಪಕ್ಷದ ಸ್ಥಾನವನ್ನು ನೀಡಿಲ್ಲ. ಇದೇ ರೀತಿ ಸಿದ್ದರಾಮಯ್ಯ ವರ್ತನೆ ತೋರುತ್ತಾ ಹೋದರೆ ಇನ್ನಷ್ಟುಶಾಸಕರು ತಂತಿಬೇಲಿ ಹಾರಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

ಮಾಜಿ ಸಿಎಂ ಸಿದ್ದು, ಕುಮಾ​ರ​ಸ್ವಾಮಿ ಬಿಎ​ಸ್‌ವೈ ನೋಡಿ ಕಲಿ​ಯ​ಲಿ:

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ, ಯಡಿಯೂರಪ್ಪರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಗೌರವ ತರುವುದಿಲ್ಲ ಎಂದು ತಿರುಗೇಟು ನೀಡಿದರಲ್ಲದೆ, ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಪಡಿಸುವತ್ತ ಹೆಜ್ಜೆ ಹಾಕಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ರಾಜ್ಯಕ್ಕೆ ಬೇಡ, ತಮ್ಮ ಸ್ವಕ್ಷೇತ್ರದಲ್ಲಾದರೂ ಇಂತಹ ಒಂದು ಕಾರ್ಯಕ್ರಮ ಜಾರಿಗೊಳಿಸಿದ್ದಾರೆಯೇ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪರನ್ನು ನೋಡಿ ಇವರುಗಳು ಸಾಕಷ್ಟುಕಲಿಯಬೇಕಿದೆ. ವಿಪಕ್ಷ ಸ್ಥಾನದಲ್ಲಿದ್ದುಕೊಂಡು ಟೀಕೆ ಮಾಡುವುದು ಸಹಜ. ಆದರೆ ಇಷ್ಟುಕೀಳುಮಟ್ಟದಲ್ಲಿ ಯೋಚನೆ ನಡೆಸಬಾರದು. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಲಿ ಎಂದು ಹೇಳಿಕೆ ನೀಡುತ್ತಾರೆ. ಮುಖ್ಯಮಂತ್ರಿ ಸ್ಥಾನ ಅವರ ಅಪ್ಪನ ಮನೆ ಆಸ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರ ಬೆವರಿನ ಫಲ ಹಾಗೂ ರಾಜ್ಯದ ಜನತೆಯ ಆಶಿರ್ವಾದದಿಂದ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಜವಾಬ್ದಾರಿಯುತ ಹೇಳಿಕೆ ನೀಡದೆ ಸರ್ಕಾರಕ್ಕೆ ಒಳ್ಳೆಯ ಸಲಹೆ ಸೂಚನೆ ನೀಡಲಿ. ಅದನ್ನು ನಾವು ಸ್ವೀಕಾರ ಮಾಡುತ್ತೇವೆ. ಸಲ್ಲದ ಹೇಳಿಕೆ ನೀಡಿದರೆ ಅವರಿಗೆ ಗೌರವ ತರುವುದಿಲ್ಲ ಎಂದರು.

ಸಿದ್ದರಾಮಯ್ಯ ಹಾಗೂ ಎಚ್‌.ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲ ಅಧಿಕಾರಕ್ಕೆ ಅಂಟಿಕೊಂಡಿದ್ದರು ಹೊರತು ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಹೀಗಾಗಿಯೇ ಅವರನ್ನು ಜನತೆ ತಿರಸ್ಕರಿಸಿದ್ದಾರೆ. ಮುಂದಿನ ಚುನಾವವಣೆಯಲ್ಲಿ ಬಿಜೆಪಿ 150ಕ್ಕೂ ಅಧಿಕ ಸ್ಥಾನ ಗಳಿಸಲಿದೆ. ಸ್ಪಷ್ಟಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದರು.

ಬೇರೆ ಅರ್ಥ ಬೇಡ: ಈಗಾಗಲೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ಸಚಿವನಾಗಿದ್ದೇನೆ. ಇದೊಂದು ಜವಾಬ್ದಾರಿಯುತ ಹುದ್ದೆ. ಅತಿ ದೊಡ್ಡ ವ್ಯಾಪ್ತಿ ಹೊಂದಿದೆ. ಹೀಗಾಗಿ ಕ್ರೀಡಾ ಇಲಾಖೆ ಸಚಿವವಾಗುವಂತೆ ಹೇಳಿದಾಗ ಚರ್ಚೆ ಮಾಡಿ ನಿರ್ಧರಿಸುತ್ತೇನೆ ಎಂದಿದ್ದೆ ಅಷ್ಟೆ. ಇದಕ್ಕೆ ಬೇರೊಂದು ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಗಳು ಕ್ರೀಡಾ ಇಲಾಖೆ ಸಚಿವನಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಸೂಚನೆ ನೀಡಿದರೆ ಧಿಕ್ಕರಿಸಲು ಸಾಧ್ಯವಿಲ್ಲ. ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆಯನೂರು ಮಂಜುನಾಥ್‌, ಕೆ.ಬಿ. ಅಶೋಕ ನಾಯಕ್‌, ಆರಗ ಜ್ಞಾನೇಂದ್ರ, ಎಸ್‌. ರುದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.