ಪೊಲೀಸರಿಗೆ ಮಂತ್ರಿಮಾಲ್ ಮಾಲಿಕರ ಹೆಸರು ತಿಳಿದಿಲ್ಲವೇ? ಅಥವಾ ಬೇಕಂತಲೇ ನಿರ್ಲಕ್ಷ್ಯ ತೋರುತ್ತಿದ್ದಾರೆಯೇ?

ಬೆಂಗಳೂರು(ಜ. 17): ಗೋಡೆ ಕುಸಿದು ಇಡೀ ಕಟ್ಟಡ ಅಪಾಯಕ್ಕೆ ಸಿಲುಕಿದ್ದರೂ, ಇಬ್ಬರು ಗಾಯಗೊಂಡಿದ್ದರೂ ಮಂತ್ರಿಮಾಲ್ ವಿರುದ್ಧ ಪೊಲೀಸರು ಗಂಭೀರವಾದ ಆರೋಪ ದಾಖಲಿಸಿಕೊಳ್ಳಲು ವಿಫಲರಾಗಿದ್ದಾರೆ. ಸಾರ್ವಜನಿಕರ ಜೀವ ರಕ್ಷಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 337 ಅಡಿಯಲ್ಲಿ ಮಂತ್ರಿ ಮಾಲ್ ಮೇಲೆ ಎಫ್''ಐಆರ್ ಮಾತ್ರ ದಾಖಲಿಸಲಾಗಿದೆ. ಯಶೋಧ ಎಂಬುವರಿಂದ ಹೇಳಿಕೆ ಪಡೆದು ದಾಖಲು ಮಾಡಿರುವ ಎಫ್'ಐಆರ್'ನಲ್ಲಿ ಮಂತ್ರಿಮಾಲ್ ಮಾಲಿಕ ಸುಶೀಲ್ ಮಂತ್ರಿ, ಸಿಇಓ ಆದಿತ್ಯ ಸಿಕ್ರಿ ಅಥವಾ ಆಡಳಿತ ಮಂಡಳಿಯವರ ಹೆಸರೇ ಇಲ್ಲ. ಪೊಲೀಸರಿಗೆ ಮಂತ್ರಿಮಾಲ್ ಮಾಲಿಕರ ಹೆಸರು ತಿಳಿದಿಲ್ಲವೇ? ಅಥವಾ ಬೇಕಂತಲೇ ನಿರ್ಲಕ್ಷ್ಯ ತೋರುತ್ತಿದ್ದಾರೆಯೇ?

ವಾಸ್ತವವಾಗಿ ಮಂತ್ರಿಮಾಲ್'ನಲ್ಲಿ ಗೋಡೆ ಕುಸಿತಕ್ಕೆ ಕಾರಣವಾಗಿದ್ದು ಮಾಲಿಕರ ದಿವ್ಯ ನಿರ್ಲದ್ಷ್ಯ ಧೋರಣೆಯೇ. ಹಿಂಬದಿ ಗೋಡೆ ಬಿರುಕು ಬಿಟ್ಟಿದ್ದರೂ ಮಂತ್ರಿಮಾಲ್'ನ ಮಾಲೀಕ ಮತ್ತು ಸಿಇಓ ಅವರು ಸುಮ್ಮನಿದ್ದರು. ಹೀಗಾಗಿ, ನಿನ್ನೆ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಲ್ಲದೇ, ನಿಯಮ ಉಲ್ಲಂಘಿಸಿ ಮಂತ್ರಿಮಾಲ್ ನಿರ್ಮಾಣವಾಗಿದ್ದು, ಇದರಲ್ಲಿ ಬಿಬಿಎಂಪಿ ಅಧಿಕಾರಿಗಳು ನಿರಪೇಕ್ಷಣ ಪತ್ರ ಹೇಗೆ ನೀಡಿದರು ಎಂಬ ಪ್ರಶ್ನೆ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಜೀವಹಾನಿಯಾಗುವಂತೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮಂತ್ರಿಮಾಲ್ ಮಾಲೀಕರು, ಸಿಇಓ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 308 ಆರ್/ಡಬ್ಲ್ಯೂ511 ಅಡಿಯಲ್ಲಿ ಎಫ್'ಐಆರ್ ದಾಖಲಿಸಬೇಕಾಗಿತ್ತು. ಆದರೆ, 337 ಸೆಕ್ಷನ್ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಹೆಚ್ಚೆಂದರೆ 6 ತಿಂಗಳು ಸಜೆ ಸಿಗಬಹುದಷ್ಟೇ.

15 ದಿನಗಳ ಕಾಲ ಮಾಲ್ ಬಂದ್?

ಗೋಡೆ ಕುಸಿತ ಕಾರಣದಿಂದ ಮಂತ್ರಿ ಮಾಲ್ ಇನ್ನೂ 15 ದಿನ ತೆರೆಯದೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಲ್ವರು ತಜ್ಞ ಸದಸ್ಯರ ಸಮಿತಿ ರಚನೆ

ಮಾಲ್ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶದ ಮೇರೆಗೆ ನಾಲ್ವರು ಸದಸ್ಯರಿರುವ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಲ್ಲಿ ಡಾ.ರಾಧಾಕೃಷ್ಣ, ಜೆ.ಎಸ್.ಜಯಸಿಂಹ, ಆರ್.ನಾಗೇಂದ್ರ, ಡಾ.ಎಂ.ಎಸ್​. ಸುದರ್ಶನ್ ಇದ್ದಾರೆ. ಇವತ್ತು ಜಂಟಿ ಆಯುಕ್ತ ಪಳಂಗಪ್ಪ ಮಾಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತಾಡಿದ ಪಳಗಂಪ್ಪ, ತನಿಖೆಯ ಆದೇಶ ಪ್ರತಿ ಇನ್ನೂ ಲಭ್ಯವಾಗಿಲ್ಲ. ತಜ್ಞರೊಂದಿಗೆ ಪಾಲಿಕೆಯವರು ಸೇರಿ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ. ಇದೇ ಹೊತ್ತಲ್ಲಿ ಮೇಯರ್ ಪದ್ಮವತಿ ತನಿಖೆಗೆ ಆದೇಶಿಸಿರುವ ಪ್ರತಿ ನನ್ನ ಕೈಸೇರಿಲ್ಲ ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಪಳಂಗಪ್ಪ ಸುವರ್ಣನ್ಯೂಸ್​ಗೆ ಸ್ಪಷ್ಟಪಡಿಸಿದ್ದಾರೆ.