ಕಳೆದ 11 ವರ್ಷಗಳಲ್ಲಿ ಮೊದಲ ಬಾರಿಗೆ ಎಂಬಂತೆ, ಸುಪ್ರೀಂ ಕೋರ್ಟ್'ನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ನ್ಯಾಯಧೀಶರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾ. ಎಮ್. ವೈ. ಇಕ್ಬಾಲ್ ಹಾಗೂ ನ್ಯಾ. ಫಕೀರ್ ಮುಹಮ್ಮದ್ ಇಬ್ರಾಹಿಮ್ ಕಲೀಫುಲ್ಲಾ ಈ ವರ್ಷ ನಿವೃತ್ತಿ ಹೊಂದಿದ್ದಾರೆ. 

2012 ಡಿಸೆಂಬರ್'ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದ ನ್ಯಾ. ಇಕ್ಬಾಲ್ ಕಳೆದ ಫೆಬ್ರವರಿಯಲ್ಲಿ, ಹಾಗೂ 2012 ಏಪ್ರಿಲ್'ನಲ್ಲಿ ನೇಮಕಗೋಂಡಿದ್ದ ನ್ಯಾ. ಕಲೀಫುಲ್ಲಾ ಕಳೆದ ಜುಲೈಯಲ್ಲಿ ನಿವೃತ್ತಿ ಹೊಂದಿದ್ದಾರೆ.

ಸುಪ್ರೀಂ ಕೋರ್ಟ್'ನಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ನ್ಯಾಯಾಧೀಶರು ಇಲ್ಲದಿರುವುದು ಕಳೆದ ಮೂರು ದಶಕಗಳಲ್ಲಿ ಇದು ಎರಡನೇ ಬಾರಿಯಾಗಿದೆ.

ನ್ಯಾಯಾಧೀಶರ ನೇಮಕಾತಿ -ಕೊಲಿಜಿಯಂ- ವಿಚಾರದಲ್ಲಿ ಸರ್ಕಾರ ಕಾಗೂ ನ್ಯಾಯಾಂಗದಲ್ಲಿ ಭಿನ್ನಾಭಿಪ್ರಾಯಗಳಿರುವುದರಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಲು ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ.

ದೇಶದ ಎರಡು - ಬಿಹಾರ ಹಾಗೂ ಹಿಮಾಚಲ ಪ್ರದೇಶ-ಹೈಕೋರ್ಟ್'ಗಳ ಮುಖ್ಯ ನ್ಯಾಯಾಧೀಶರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 

ಈ ಬಗ್ಗೆ ಇಂಡಿಯನ್ ಎಕ್ಸ್'ಪ್ರೆಸ್ ಜತೆ ತಮ್ಮ ಕಳವಳವನ್ನು ಹಂಚಿಕೊಂಡಿರುವ ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್, ಇದು ಹಕ್ಕುಗಳ ಪ್ರಶ್ನೆಯಲ್ಲ, ಬದಲಾಗಿ ಸುಪ್ರೀಂ ಕೋರ್ಟ್'ನಲ್ಲಿ ಎಲ್ಲಾ ಧರ್ಮ-ಸಮುದಾಯಗಳನ್ನು ಪ್ರಾತಿನಿಧ್ಯದ ವಿಷಯವಾಗಿದೆ ಎಂದಿದ್ದಾರೆ.