ವೈದಿಕ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದು ಬೇಡ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ತನ್ನ 2016-17ನೇ ಸಾಲಿನ ವಾರ್ಷಿಕ ವರದಿಯಲ್ಲಿ ಶಿಫಾರಸು ಮಾಡಿದೆ

ನವದೆಹಲಿ(ಜ.15): ವೈದಿಕ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದು ಬೇಡ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ತನ್ನ 2016-17ನೇ ಸಾಲಿನ ವಾರ್ಷಿಕ ವರದಿಯಲ್ಲಿ ಶಿಫಾರಸು ಮಾಡಿದೆ. ‘ವೈದಿಕ ಬ್ರಾಹ್ಮಣರು ಹಿಂದು ಧರ್ಮದ ಅವಿಭಾಜ್ಯ ಅಂಗ.

ಕೇವಲ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗದು. ಒಂದು ವೇಳೆ ಅವರಿಗೆ ಈ ಸ್ಥಾನ ನೀಡಿದರೆ ಹಿಂದು ಧರ್ಮದಲ್ಲಿನ ಇತರ ಸಮುದಾಯಗಳಾದ ರಜಪೂತ ಹಾಗೂ ವೈಶ್ಯರು ಕೂಡ ಈ ಬೇಡಿಕೆ ಇಡುತ್ತಾರೆ. ಅದು ಹಿಂದು ಧರ್ಮದ ವಿಘಟನೆಗೆ ಕಾರಣವಾಗುತ್ತದೆ’ ಎಂದು ಅಲ್ಪಸಂಖ್ಯಾತ ಆಯೋಗ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ವೈದಿಕ ಸಂಸ್ಕೃತಿ ಹಾಗೂ ವೇದಗಳನ್ನು ರಕ್ಷಿಸಬೇಕು ಎಂಬ ನಿಲುವನ್ನು ಹೊಂದಿರುವ ವಿಶ್ವಸಂಸ್ಥೆಯ ಸಾಂಸ್ಕೃತಿಕ ಸಂಘಟನೆಯಾದ ಯುನೆಸ್ಕೋ ಕೂಡ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದನ್ನು ವಿರೋಧಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯು ಸಂಸತ್ತಿನಲ್ಲಿ ಮಂಡನೆಯಾಗಬೇಕಿದೆ. ವಿಶ್ವ ಬ್ರಾಹ್ಮಣ ಸಂಘಟನೆ ಹಾಗೂ ಪೂರ್ವೋತ್ತರ ಬಹುಭಾಷೀಯ ಬ್ರಾಹ್ಮಣ ಮಹಾಸಭಾಗಳು ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದ್ದವು.