Asianet Suvarna News Asianet Suvarna News

ತಿಂಗಳು ಕಳೆದರೂ ಗೌರಿ ಹಂತಕರ ಸುಳಿವಿಲ್ಲ

ಸುಳಿವು ಸಿಕ್ಕಿದೆ ಎಂದು ಹೇಳುತ್ತಿದ್ದರೂ ಆರೋಪಿಗಳ ಪತ್ತೆ ಇಲ್ಲ | ಎಸ್‌ಐಟಿಗೆ ಸವಾಲಾದ ಕೇಸ್

No Leads in Gauri Lankesh Murder Case

ಬೆಂಗಳೂರು: ಹತ್ಯೆ ನಡೆದು ಗುರುವಾರಕ್ಕೆ ಒಂದು ತಿಂಗಳು ಮುಗಿದರೂ ಇದುವರೆಗೆ ಹಂತಕರ ಬಗ್ಗೆ ಸಣ್ಣದೊಂದು ಸುಳಿವೂ ಸಿಗದೆ ರಾಜ್ಯ ಸರ್ಕಾರಕ್ಕೆ ಮತ್ತು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ (ಎಸ್’ಐಟಿ) ಸವಾಲಾಗಿ ಪರಿಣಮಿಸಿದೆ.

ಈ ಕೃತ್ಯ ಭೇದಿಸಲು ಹಿರಿಯ ಐಜಿಪಿ ಬಿ.ಕೆ.ಸಿಂಗ್ ಉಸ್ತುವಾರಿಯಲ್ಲಿ ಡಿಸಿಪಿ ಅನುಚೇತ್ ಅವರ ಸಾರಥ್ಯದಲ್ಲಿ ನೂರಕ್ಕೂ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ಬೃಹತ್ ಪಡೆ ನಿಯೋಜಿತವಾಗಿದ್ದು, ವೈಚಾರಿಕ ಭಿನ್ನಾಭಿಪ್ರಾಯ, ವೈಯಕ್ತಿಕ, ನಕ್ಸಲ್ ಹಾಗೂ ವೃತ್ತಿ ಸಂಬಂಧಿ ವಿಚಾರಗಳು ಸೇರಿದಂತೆ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಈವರೆಗೆ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಶೋಧ ನಡೆಸಿರುವ ಅಧಿಕಾರಿಗಳು, ನಾಡಿನ ಕಾರಾಗೃಹಗಳನ್ನು ಕೂಡಾ ಹೊಕ್ಕಿ ಹುಡುಕಾಡಿ ಬಂದಿದ್ದಾರೆ. ಅಸಂಖ್ಯಾತ ಮೊಬೈಲ್ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದ್ದಾರೆ.

ಗೌರಿ ಅವರ ಸಂಪಾದಕತ್ವದ ಪತ್ರಿಕಾ ಬಳಗದವರು, ಮಾಜಿ ನಕ್ಸಲರು, ಗೆಳೆಯರು, ಅವರ ಕುಟುಂಬದವರು ಹಾಗೂ ಗೌರಿ ಅವರ ಮೇಲೆ ಮಾನನಷ್ಟ ಮೊಕ್ದಮೆ ದಾಖಲಿಸಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ, ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಸೇರಿ ಹಲವರು ಎಸ್‌ಐಟಿ ವಿಚಾರಣೆ ಎದುರಿಸಿದ್ದಾರೆ.

ಆದರೆ ಈವರೆಗೆ ಹಂತಕರ ಬಗ್ಗೆ ಖಚಿತವಾದ ಸುಳಿವು ಸಿಗುತ್ತಿಲ್ಲ. ಈ ನಡುವೆ ರಾಜ್ಯ ಗೃಹ ಮಂತ್ರಿ ರಾಮಲಿಂಗಾರೆಡ್ಡಿ ಅವರು, ಕೃತ್ಯ ನಡೆದ ದಿನದಿಂದಲೂ ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಮೇಲಿಂದ ಮೇಲೆ ಹೇಳಿಕೆ ನೀಡುತ್ತಿದ್ದಾರೆ. ಆದರೆ ಸಚಿವರ ಹೇಳಿಕೆ ಬಗ್ಗೆ ವಿಶ್ವಾಸ

ಮೂಡಿಸುವ ಸೂಚನೆಗಳು ಎಸ್‌ಐಟಿ ಕಡೆಯಿಂದ ಬಾರದಿರುವುದು ಪ್ರಶ್ನಾರ್ಹ ವಾಗಿದೆ. ಸೆ.5ರಂದು ರಾಜರಾಜೇಶ್ವರಿ ನಗರದ ತಮ್ಮ ಮನೆ ಬಳಿ ಗೌರಿ ಲಂಕೇಶ್ ಅವರು ಹತ್ಯೆಯಾಗಿದ್ದರು.

Follow Us:
Download App:
  • android
  • ios