ನವದೆಹಲಿ :  ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕು ಎಂದು ಪ್ರಬಲವಾಗಿ ಆಗ್ರಹ ಮಾಡುತ್ತಿರುವ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ. ಜೆಪಿಸಿ ತನಿಖೆ ಬೇಡಿಕೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ತಿರಸ್ಕರಿಸಿದೆ.

ರಫೇಲ್‌ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಆತ್ಮತೃಪ್ತಿಯಾಗಿದೆ. ಹೀಗಾಗಿ ಜೆಪಿಸಿಯ ಅಗತ್ಯವಿಲ್ಲ. ಜೆಪಿಸಿ ಎಂಬುದು ಪಕ್ಷಪಾತದ ಸಂಸ್ಥೆಯಾಗಿದ್ದು, ಅದು ಪಾರದರ್ಶಕವಾಗಿ ತನಿಖೆ ನಡೆಸುವುದಿಲ್ಲ. ಬೊಫೋರ್ಸ್‌ ಹಗರಣದಲ್ಲಿ ಮುಳುಗಿರುವ ಕಾಂಗ್ರೆಸ್‌ ಪಕ್ಷದ ಜೆಪಿಸಿ ಬೇಡಿಕೆಯನ್ನು ಸ್ವೀಕರಿಸುವುದರಲ್ಲಿ ಅರ್ಥವಿಲ್ಲ. ಬೊಫೋರ್ಸ್‌ ಹಗರಣದ ಜೆಪಿಸಿಯನ್ನು ಸ್ಮರಿಸಿಕೊಳ್ಳಿ. ಲಂಚವನ್ನು ಮಾರಾಟ ಶುಲ್ಕ ಎಂದು ಬಣ್ಣಿಸಿ, ಭ್ರಷ್ಟಾಚಾರಕ್ಕೆ ಶ್ವೇತಬಣ್ಣ ಬಳಿದಿತ್ತು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ರಫೇಲ್‌ ಕುರಿತ ಚರ್ಚೆ ವೇಳೆ ಟಾಂಗ್‌ ನೀಡಿದರು.

ಖಾಲಿ ಯುದ್ಧ ವಿಮಾನದ ಬೆಲೆಯನ್ನು ಬೇಕಿದ್ದರೆ ಹೇಳಬಹುದು. ಆದರೆ ಶಸ್ತ್ರ ಭರಿತ ಯುದ್ಧ ವಿಮಾನದ ಬೆಲೆಯನ್ನು ಬಹಿರಂಗಪಡಿಸಿದರೆ ದೇಶದ ವಿರೋಧಿಗಳಿಗೆ ನೆರವಾಗುತ್ತದೆ. ಖಾಲಿ ವಿಮಾನಕ್ಕೆ ಯುಪಿಎ ಕುದುರಿಸಿದ್ದಕ್ಕಿಂತ ಶೇ.9 ಕಡಿಮೆ ಬೆಲೆಗೆ ಹಾಗೂ ಶಸ್ತ್ರಸಜ್ಜಿತ ವಿಮಾನವನ್ನು ಶೇ.20ರಷ್ಟುಅಗ್ಗದ ದರದಲ್ಲಿ ಖರೀದಿಸಲಾಗುತ್ತಿದೆ ಎಂದು ಹೇಳಿದರು.

ಈ ಹಿಂದಿನ ರಕ್ಷಣಾ ಹಗರಣಗಳಲ್ಲಿ ಸಂಚುದಾರರಾಗಿದ್ದವರು ಈಗ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬೆರಳು ತೋರಿಸುತ್ತಿದ್ದಾರೆ. ಕೆಲವು ವ್ಯಕ್ತಿ ಹಾಗೂ ಕುಟುಂಬಗಳಿಗೆ ಹಣಕಾಸಿನ ಲೆಕ್ಕಾಚಾರವಷ್ಟೇ ಗೊತ್ತಾಗುತ್ತದೆ. ರಾಷ್ಟ್ರೀಯ ಭದ್ರತೆಯ ವಿಷಯಗಳು ಅಲ್ಲ ಎಂದು ಕಾಂಗ್ರೆಸ್ಸಿನ ವಿರುದ್ಧ ಕುಟುಕಿದರು.

ರಾಹುಲ್‌ಗೆ ಜೇಟ್ಲಿ ಚಾಟಿ:  ಇದೇ ವೇಳೆ ರಫೇಲ್‌ ವಿಷಯ ಪ್ರಸ್ತಾಪಿಸಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಅರುಣ್‌ ಜೇಟ್ಲಿ ಚಾಟಿ ಬೀಸಿದರು. ಕಾಂಗ್ರೆಸ್‌ನಂತಹ ಹಳೆಯ ಪಕ್ಷವನ್ನು ಈ ಹಿಂದೆ ದೊಡ್ಡ ದೊಡ್ಡ ನಾಯಕರು ಮುನ್ನಡೆಸಿದ್ದರು. ಆದರೆ ಈಗ ಆ ಪಕ್ಷದ ಅಧ್ಯಕ್ಷನಾಗಿರುವ ವ್ಯಕ್ತಿಗೆ ಯುದ್ಧ ವಿಮಾನದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ಕೆಲವು ವ್ಯಕ್ತಿಗಳಿಗೆ ಸತ್ಯದ ಬಗ್ಗೆ ಸ್ವಾಭಾವಿಕವಾಗಿ ಇಷ್ಟವಿರುವುದಿಲ್ಲ. ಕಳೆದ ಆರು ತಿಂಗಳಿನಿಂದ ಈ ವಿಷಯವಾಗಿ ಅವರು ಮಾತನಾಡಿರುವ ಪ್ರತಿಯೊಂದು ಪದವೂ ಸುಳ್ಳು. ಸುಳ್ಳು ಹೇಳುವ ಪರಂಪರೆಯನ್ನೇ ಅವರು ಹೊಂದಿದ್ದಾರೆ ಎಂದು ರಾಹುಲ್‌ ವಿರುದ್ಧ ಹರಿಹಾಯ್ದರು.

ಇದೇ ವೇಳೆ ಜೇಮ್ಸ್‌ ಬಾಂಡ್‌ ಮಾತುಗಳನ್ನು ಉಲ್ಲೇಖಿಸಿದ ಜೇಟ್ಲಿ, ಮೂರು ಬಾರಿ ತಪ್ಪು ನಡೆದರೆ ಅದು ಸಂಚು. ರಾಹುಲ್‌ ಗಾಂಧಿ ಅದನ್ನೇ ಮಾಡುತ್ತಿದ್ದಾರೆ ಎಂದರು.